ಬೃಹತ್ ಬಂಡೆಗಳು ಉರುಳಿ ಬಿದ್ದು ವ್ಯಕ್ತಿ ಸಾವು

KannadaprabhaNewsNetwork | Published : Apr 18, 2025 12:41 AM

ಸಾರಾಂಶ

ಗುಡ್ಡದಲ್ಲಿ ಗರಸು ತೆಗೆಯುವಾಗ ಗುಡ್ಡದ ಮೇಲಿನ ಬೃಹತ್ ಬಂಡೆಗಳು ಉರುಳಿ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಯಡ್ರಾಂವಿ ಗ್ರಾಮದ ಹದ್ದಿಯ ಬೆಟಸೂರಕ್ಕೆ ಹೋಗುವ ರಸ್ತೆ ಬದಿ ಸಂಭವಿಸಿದೆ. ಘಟನೆಯಲ್ಲಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಕೂಡ ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಗುಡ್ಡದಲ್ಲಿ ಗರಸು ತೆಗೆಯುವಾಗ ಗುಡ್ಡದ ಮೇಲಿನ ಬೃಹತ್ ಬಂಡೆಗಳು ಉರುಳಿ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಯಡ್ರಾಂವಿ ಗ್ರಾಮದ ಹದ್ದಿಯ ಬೆಟಸೂರಕ್ಕೆ ಹೋಗುವ ರಸ್ತೆ ಬದಿ ಸಂಭವಿಸಿದೆ. ಘಟನೆಯಲ್ಲಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಕೂಡ ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ. ಯಡ್ರಾಂವಿ ಗ್ರಾಮದ ಅರ್ಜುನ ದ್ಯಾಮಪ್ಪ ಚುಳಕಿ (೪೬) ಮಣ್ಣಿನಡಿ ಸಿಲುಕಿ ಮೃತ ವ್ಯಕ್ತಿ. ಗುರುವಾರ ಬೆಳಗ್ಗೆ ಮಣ್ಣಿನಡಿ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಆಗಿದ್ದೇನು?:

ಬುಧವಾರ ರಾತ್ರಿ 8.30ರ ಸುಮಾರಿಗೆ ಗುಡ್ಡದ ಪಕ್ಕದಲ್ಲಿ ಜೆಸಿಬಿ ಬಳಸಿ ಗರಸು ಅಗೆಯಲಾಗುತ್ತಿತ್ತು. ಈ ವೇಳೆ ಏಕಾಏಕಿ ಬೃಹತ್ ಬಂಡೆಗಳು ಗುಡ್ಡದ ಮೇಲಿಂದ ಉರುಳಿ ಬಿದ್ದಿವೆ. ವಿಷಯ ತಿಳಿದ ಕೂಡಲೇ ಸವದತ್ತಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿತ್ತು. ನಜ್ಜುಗುಜ್ಜಾದ ವಾಹನಗಳು ಸಿಕ್ಕವು. ಅರ್ಜುನ ಕೂಡ ಬಂಡೆಗಲ್ಲುಗಳ ಮಧ್ಯೆ ಸಿಲುಕಿದ್ದರು. ಕಾರ್ಯಾಚರಣೆಗೆ ಬೆಳಗ್ಗೆಯವರೆಗೂ ಕಾಯಬೇಕಾಯಿತು. ಬಳಿಕ ಅರ್ಜುನ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ

ಇದೇ ಶನಿವಾರ ಅರ್ಜುನ ಅವರ ಸಹೋದರನ ಇಬ್ಬರು ಮಕ್ಕಳ ಮದುವೆ ನಿಶ್ಚಯವಾಗಿತ್ತು. ಮದುವೆ ಹಿನ್ನೆಲೆ ಮನೆಯ ಮುಂದೆ ಪೆಂಡಾಲು ಕೂಡ ಹಾಕಲಾಗಿತ್ತು. ಮದುವೆ ಹಿನ್ನೆಲೆ ಪೆಂಡಾಲ್ ಕೆಳಗಿನ ನೆಲವನ್ನು ಸಮತಟ್ಟು ಮಾಡಲು ಅರ್ಜುನ ಅವರು ಗರಸು ತರಲು ಹೋಗಿದ್ದರು. ಮೊದಲು ಒಂದು ಟ್ರಿಪ್ ಟ್ರ‍್ಯಾಕ್ಟರಿನಲ್ಲಿ ತಂದು ಹಾಕಿದ್ದರು. ಮತ್ತೊಂದು ಟ್ರಿಪ್ ತರಲು ಹೋದಾಗ ಈ ಅವಘಡ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share this article