ಸರ್ಕಾರಗಳ ಬಿಟ್ಟಿ ಭಾಗ್ಯಗಳಿಂದ ಮನುಷ್ಯ ಸೋಮಾರಿ

KannadaprabhaNewsNetwork |  
Published : Jul 07, 2025, 11:48 PM IST
ರಂಭಾಪುರಿ ಪೂಜ್ಯರು ಆಶಿರ್ವಚನ ನೀಡಿದರು. | Kannada Prabha

ಸಾರಾಂಶ

ರೈತರು ಕಷ್ಟಪಟ್ಟು ದುಡಿದರೆ ಭೂಮಿತಾಯಿ ಕೈಬಿಡುವುದಿಲ್ಲ. ಸಾಲಕ್ಕಾಗಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದಲ್ಲ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಸರ್ಕಾರಗಳು ಜನರಿಗೆ ನೀಡುವ ಯೋಜನೆಗಳಿಂದ ಜನರ ಬದುಕು ಉಜ್ವಲಗೊಳ್ಳುವುದಿಲ್ಲ. ಇಂದಿನ ಸರ್ಕಾರಗಳು ನೀಡುವ ಬಿಟ್ಟಿ ಭಾಗ್ಯಗಳಿಂದ ಮನುಷ್ಯ ಸೋಮಾರಿಯಾಗುತ್ತಿದ್ದಾನೆ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಚಿಪ್ಪಲಕಟ್ಟಿಯ ಕಲ್ಮೇಶ್ವರಸ್ವಾಮಿಗಳ ಷಷ್ಠಿಪೂರ್ತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ದೇಶದಲ್ಲಿ ರೈತ, ಯೋಧ ಎರಡು ಕಣ್ಣುಗಳಿದ್ದಂತೆ. ರೈತರು ಕಷ್ಟಪಟ್ಟು ದುಡಿದರೆ ಭೂಮಿತಾಯಿ ಕೈಬಿಡುವುದಿಲ್ಲ. ಸಾಲಕ್ಕಾಗಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದಲ್ಲ. ನಂಬಿದವರನ್ನು ಬಿಟ್ಟು ಹೋಗುವುದು ಸರಿಯಲ್ಲ. ಜೀವನದಲ್ಲಿ ಕಷ್ಟ-ಸುಖ ಸಮನಾಗಿ ಸ್ವೀಕರಿಸುವುದು ಅಗತ್ಯವಾಗಿದೆ ಎಂದು ನುಡಿದರು.

ಮುಂಚೆ ಸಾವಯವ ಕೃಷಿ ಮಾಡುವ ವೇಳೆ ಅಂದು ರೋಗಳ ಸಂಖ್ಯೆ ಕಡಿಮೆಯಿದ್ದವು. ಆದರೆ ಇಂದು ರಾಸಾಯನಿಕ ಗೊಬ್ಬರ, ಕೀಟನಾಶ ಬಳಕೆಯಿಂದ ನಮ್ಮ ಬದುಕು ವಿಷಕಾರಿ ಆಹಾರ, ಗಾಳಿ ಸೇವನೆಯಿಂದ ಹಲವು ರೋಗಗಳು ನಮ್ಮನ್ನು ಕಾಡುತ್ತಿವೆ. ಎಷ್ಟು ಹಣ ಖರ್ಚು ಮಾಡಿದರು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ರೈತರು ಇಂದು ಭೂಮಿ ಮಾರಾಟ ಮಾಡಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ವಿಷಾದನೀಯ ಎಂದರು.

ಸಾಹಿತ್ಯ, ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಜನರಿಗಿಂತ ಹೆಚ್ಚು ಮಠ-ಮಂದಿರಗಳ ಮೇಲಿದೆ. ಜನರು ತಿಳವಳಿಕೆ ಕೊರತೆಯಿಂದ ತಪ್ಪು ದಾರಿ ಹಿಡಿದಿರಬಹುದು, ಅವರರನ್ನು ಸರಿ ದಾರಿಗೆ ತರುವ ಗುರುತರ ಹೊಣೆ ಮಠಾಧೀಶರ ಮೇಲಿದೆ. ನೂರಾರು ಒಳಪಂಗಡಗಳನ್ನು ಹೊಂದಿರುವ ವೀರಶೈವ ಲಿಂಗಾಯತ ಧರ್ಮದಲ್ಲಿ ರಾಜಕೀಯ ವಾತಾವರಣ ಅಥವಾ ಪರಿಸರವೋ ಗೊತ್ತಿಲ್ಲ ಜನರಿಗೆ ಧರ್ಮದ ಅಭಿಮಾನಕ್ಕಿಂತ ಒಳಜಾತಿಗಳ ಅಭಿಮಾನ ಹೆಚಾಗುತ್ತಿರುವುದರಿಂದ ಲಿಂಗಾಯತ ಧರ್ಮ ಒಡೆದು ಹೋಗುತ್ತಿದೆ. ಧರ್ಮ ಉಳಿದರೆ ಮಾತ್ರ ನಾವೆಲ್ಲ ಸುಖ ಸಂತೋಷದಿಂದ ಇರಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಒಳಿತಿಗಾಗಿ ಒಂದಾಗಿರಬೇಕಾಗಿದೆ. ಧರ್ಮದ ಆಚರಣೆಗೆ ಧಕ್ಕೆ ಬಂದಾಗ ಜಾಗೃತಿ ಮೂಡಿಸುವ ಕಾರ್ಯವನ್ನು ಮಠಗಳು ಮೊದಲಿನಿಂದಲೂ ಮಾಡುತ್ತಿವೆ, ಮುಂದೆ ಕೂಡಾ ಧರ್ಮ ಸಂರಕ್ಷಣೆಗೆ ಮಠಗಳು ಮುಂದಾಗಬೇಕೆಂದರು.

ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 60 ಜನ ಪೂಜ್ಯರ ಪಾದಪೂಜೆ, 60 ನಿವೃತ್ತ ಯೋಧರ ಹಾಗೂ 60 ಜನ ರೈತರನ್ನು ಸನ್ಮಾನಿಸಲಾಯಿತು. ಕಟಕೋಳದ ಸಚ್ಚಿದಾನಂದಸ್ವಾಮೀಜಿ, ಎಂ.ಚಂದರಗಿಯ ವೀರಭದ್ರ ಶಿವಾಚಾರ್ಯರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಹೊಸಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯರು ಸೇರಿದಂತೆ ಹಲವರಿದ್ದರು.

21, 22ರಂದು ಶೃಂಗ ಸಮ್ಮೇಳನ

ಪೀಠಾಚಾರ ಹಾಗೂ ಶಿವಾಚಾರರ ಶೃಂಗ ಸಮ್ಮೇಳನ ಜು.21 ಮತ್ತು 22ರಂದು ದಾವಣಗೆರಿಯಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ತಮಿಳನಾಡುಗಳ ಪೂಜ್ಯರು, ಲಿಂಗಾಯತ ಸಮುದಾಯದ ರಾಜಕೀಯ ನಾಯಕರು ಆಗಮಿಸುತ್ತಾರೆ. ಪಂಚಪೀಠಗಳ ಪೂಜ್ಯರು ಆಗಮಿಸುವವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು