ಹುಬ್ಬಳ್ಳಿ: ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು, ಬೊಜ್ಜು ಹೆಚ್ಚಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿರುವುದು ಮತ್ತು ಅಧಿಕ ಬೊಜ್ಜಿನ ಪೊಲೀಸ್ ಸಿಬ್ಬಂದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವುದರಿಂದ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ತನ್ನ ಸಿಬ್ಬಂದಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಇಲಾಖೆಯಲ್ಲಿ ಹೆಚ್ಚು ತೂಕ ಹೊಂದಿರುವವರನ್ನು ಗುರುತಿಸಿ ಫಿಟ್ನೆಸ್ ತರಬೇತಿ ಸಹ ನೀಡಿದೆ.
28 ದಿನಗಳ ಫಿಟ್ನೆಸ್ ಶಿಬಿರದಲ್ಲಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 65 ಪೊಲೀಸ್ ಸಿಬ್ಬಂದಿ ಸರಾಸರಿ 5 ರಿಂದ 6 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇದರಿಂದಾಗಿ ಶಿಬಿರ ಯಶಸ್ವಿಯಾಗಿದ್ದು, ಕರ್ತವ್ಯ ನಿರ್ವಹಣೆಗೆ ಮತ್ತಷ್ಟು ಚೈತನ್ಯ ಬಂದಂತಾಗಿದೆ.
ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೆ ಸೋಮವಾರ ಭೇಟಿ ನೀಡಿದ ಆಯುಕ್ತ ಎನ್. ಶಶಿಕುಮಾರ್ ಶಿಬಿರದ ಕುರಿತಂತೆ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಅಧಿಕಾರಿ ಮತ್ತು ಸಿಬ್ಬಂದಿಗೆ 28 ದಿನಗಳ ಆರೋಗ್ಯ ಫಿಟ್ನೆಸ್ ತರಬೇತಿ ನೀಡಲಾಗಿದ್ದು, ಸುಮಾರು ಜನರು 4 ರಿಂದ 11 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಇದರಲ್ಲಿ ಎಎಸ್‌ಐ ಮೋಹನ ಕುಲಕರ್ಣಿ 11 ಕೆಜಿ, ಹೆಡ್ ಕಾನ್‌ಸ್ಟೇಬಲ್ ರವಿ ಹೊಸಮನಿ ಮತ್ತು ಬಸವರಾಜ ಬೆಳಗಾವಿ 9 ಕೆಜಿ, ಹಾಗೂ ಮಹಿಳಾ ಎಎಸ್‌ಐ ದಿಲ್ಶಾದ್ ಮುಲ್ಲಾ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮೊದಲ ಹಂತದ ಶಿಬಿರದಲ್ಲಿ ಘಟಕ ವ್ಯಾಪ್ತಿಯ 65 ಸಿಬ್ಬಂದಿ ಗುರುತಿಸಲಾಗಿತ್ತು. ಅವರೆಲ್ಲರೂ ನಿರಂತರವಾಗಿ 28 ದಿನಗಳ ತರಬೇತಿಯಲ್ಲಿ ಒಟ್ಟು 400ಕ್ಕೂ ಹೆಚ್ಚು ಕೆಜಿ ತೂಕದ ಬೊಜ್ಜು ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ದೈಹಿಕ ಸದೃಢತೆ ಬಹಳ ಮಹತ್ವವಾಗಿದೆ. ಆ ನಿಟ್ಟಿನಲ್ಲಿ ನೇಮಕಾತಿ ಸಂದರ್ಭದಲ್ಲಿಯೇ ಅವರ ಫಿಟ್ನೆಸ್ ಟೆಸ್ಟ್ ಮಾಡಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ, ನೇಮಕಾತಿಯ ನಂತರ ಕೆಲವರು ಫಿಟ್ನೆಸ್ ಕಾಯ್ದುಕೊಳ್ಳಲ್ಲ, ಸಿನಿಮಾದಲ್ಲಿ ತೋರಿಸುವಂತೆ ನಮ್ಮ ಇಲಾಖೆಯಲ್ಲಿ ಪೊಲೀಸರು ಅತಿಯಾದ ಬೊಜ್ಜು ಹೊಂದಿಲ್ಲ. ಶೇ. 90ರಷ್ಟು ಜನ ದೈಹಿಕವಾಗಿ ಸದೃಢವಾಗಿದ್ದಾರೆ ಎಂದರು.
ಕಳೆದ ನಾಲ್ಕು ವಾರಗಳಿಂದ ಹಿರಿಯ ಅಧಿಕಾರಿಗಳ ಸೂಚನೆಯಂತೆ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಇದರಲ್ಲಿ 90 ಕೆಜಿಗಿಂತ ಹೆಚ್ಚಿರುವ ಪುರುಷ ಮತ್ತು 70 ಕೆಜಿಗಿಂತ ಹೆಚ್ಚಿರುವ ಮಹಿಳಾ ಸಿಬ್ಬಂದಿ ಗುರುತಿಸಲಾಗಿತ್ತು. ಕೆಲವರು ಮೊದಲು ಅಸಡ್ಡೆ ತೋರಿದ್ದು ನಂತರ ಸಂತೋಷದಿಂದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇನ್ನೊಂದು ವಾರ ತರಬೇತಿ ಮುಂದುವರೆಸಲಾಗುವುದು ಎಂದರು.
ತರಬೇತಿ ವೆಚ್ಚವನ್ನು ಸಿಬ್ಬಂದಿಯೇ ಭರಿಸಿದ್ದು, ತರಬೇತಿಯಲ್ಲಿ ಭಾಗವಹಿಸಿದವರು 40 ವರ್ಷ ಮೇಲ್ಪಟ್ಟವರಾಗಿದ್ದಾರೆ. ಒಂದು ತಿಂಗಳ ಕಾರ್ಯಾಗಾರದಲ್ಲಿ ಹೊಸ ಸಿಎಆರ್ ಮೈದಾನದಲ್ಲಿ ವಾಸ್ತವ್ಯವಿದ್ದು, ಬೆಳ್ಳಗ್ಗೆಯಿಂದ ರಾತ್ರಿ ವರೆಗೆ ವಾಕಿಂಗ್, ರನ್ನಿಂಗ್, ಯೋಗ, ಡ್ರಿಲ್, ಮೆಡಿಟೇಷನ್, ಕ್ರೀಡೆ, ಆರೋಗ್ಯಕರ ಊಟ ಸೇರಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು. ಮುಂದಿನ ಬ್ಯಾಚ್‌ನಲ್ಲಿ ಪೊಲೀಸ್ ಸಿಬ್ಬಂದಿ ಕುಟುಂಬದವರಿಗೆ ಶಿಬಿರ ಏರ್ಪಡಿಸಲಾಗುವುದು. ಅದಾದ ಬಳಿಕ ಇಲಾಖೆಯಲ್ಲಿನ ಮತ್ತಷ್ಟು ಜನರನ್ನು ಗುರುತಿಸಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಯಲ್ಲಪ್ಪ ಕಾಶಪ್ಪನವರ ಸೇರಿದಂತೆ ಇನ್ಸಪೆಕ್ಟರ್‌ಗಳಿದ್ದರು.
28 ದಿನಗಳ ಕಾಲ ನಮಗೆ ದೈಹಿಕವಾಗಿ ಸದೃಢ ಕಾಪಾಡಲು ಉತ್ತಮ ತರಬೇತಿ ನೀಡಲಾಗಿದೆ. ದಿನವಿಡಿ ನಮ್ಮನ್ನು ವಿವಿಧ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದುವಂತಾಗಿದೆ. ಯೋಗ, ಮೆಡಿಟೇಷನ್, ಕ್ರೀಡೆಯಂತಹ ಚಟುವಟಿಕೆಯಲ್ಲಿ ಪಾಲ್ಗೊಂಡು 9 ಕೆಜಿ ತೂಕ ಕಳೆದುಕೊಂಡಿರುವೆ ಎಂದು ಹೆಡ್ ಕಾನ್‌ಸ್ಟೆಬಲ್ ರವಿ ಹೊಸಮನಿ ಹೇಳಿದರು.