ಆಸ್ತಿಗಾಗಿ ಸೊಸೆ, ಮೊಮ್ಮಕ್ಕಳೊಂದಿಗೆ ಪುತ್ರನನ್ನೇ ಕೊಂದ

KannadaprabhaNewsNetwork |  
Published : Oct 18, 2026, 03:30 AM IST
ಭೀಮಪ್ಪ ಯಮಗಾರ, ಪತ್ನಿ ಶೈಲವ್ವ, ಪುತ್ರರಾದ ಕಾಡಪ್ಪ, ರಮೇಶ ಹಾಗೂ ಆತನ ಅಳಿಯ ಮಳೆಪ್ಪ  | Kannada Prabha

ಸಾರಾಂಶ

ಆಸ್ತಿ ವಿವಾದದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ಗಲಗಲಿ ಸಮೀಪದ ಕೃಷ್ಣಾ ನದಿ ಹಿನ್ನೀರಿನಲ್ಲಿ ಎಸೆದ ಪ್ರಕರಣವನ್ನು ಜಮಖಂಡಿ ಗ್ರಾಮೀಣ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಮೃತನ ತಂದೆ, ಪತ್ನಿ ಹಾಗೂ ಮಕ್ಕಳು ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಆಸ್ತಿ ವಿವಾದದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ಗಲಗಲಿ ಸಮೀಪದ ಕೃಷ್ಣಾ ನದಿ ಹಿನ್ನೀರಿನಲ್ಲಿ ಎಸೆದ ಪ್ರಕರಣವನ್ನು ಗ್ರಾಮೀಣ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಮೃತನ ತಂದೆ, ಪತ್ನಿ ಹಾಗೂ ಮಕ್ಕಳು ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಜಮಖಂಡಿ ನಗರದ ಸುವರ್ಣಾ ಚಿತ್ರಮಂದಿರದ ಸಮೀಪದ ನಿವಾಸಿ ಸಿದ್ದಪ್ಪ ಭೀಮಪ್ಪ ಯಮಗಾರ (50) ಕೊಲೆಯಾದವರು. ಕೊಲೆಯಾದ ಸಿದ್ದಪ್ಪನ ತಂದೆ ಭೀಮಪ್ಪ ಯಮಗಾರ, ಪತ್ನಿ ಶೈಲವ್ವ, ಪುತ್ರರಾದ ಕಾಡಪ್ಪ, ರಮೇಶ ಹಾಗೂ ಆತನ ಅಳಿಯ ಮಳೆಪ್ಪ ಸಿದ್ದಪ್ಪ ಬೆಳ್ಳುದ್ದಿ ಬಂಧಿತ ಆರೋಪಿಗಳು.

ಆಸ್ತಿ ವಿಚಾರವಾಗಿ ವೈಷಮ್ಯ:

ಸಿದ್ದಪ್ಪ ಯಮಗಾರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ವಿವಾದವಿತ್ತು. ಈ ಸಂಬಂಧ ನಡೆದಿದ್ದ ಸಿವಿಲ್ ವ್ಯಾಜ್ಯದಲ್ಲಿ ಸಿದ್ದಪ್ಪ, ಅವರ ಅಕ್ಕಂದಿರ ಪರವಾಗಿ ನ್ಯಾಯಾಲಯದ ತೀರ್ಪು ಬಂದಿತ್ತು. ಇದರಿಂದ ಸಿದ್ದಪ್ಪನ ಪತ್ನಿ, ಮಕ್ಕಳು ಹಾಗೂ ತಂದೆಗೆ ಅವರ ಮೇಲೆ ದ್ವೇಷ ಉಂಟಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಉಳಿದ ಆಸ್ತಿಯನ್ನೂ ಕುಟುಂಬದ ಹೊರಗಿನವರಿಗೆ ಸಿದ್ದಪ್ಪ ವರ್ಗಾಯಿಸಬಹುದು ಎಂಬ ಆತಂಕದಲ್ಲಿದ್ದ ಆರೋಪಿಗಳು ಸಿದ್ದಪ್ಪ ಯಮಗಾರನನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸ್‌ ಮಾಹಿತಿ ಪ್ರಕಾರ, ಸಿದ್ದಪ್ಪನನ್ನು ಜಮೀನಿನ ಸಮೀಪದಲ್ಲೇ ಹತ್ಯೆ ಮಾಡಿದ್ದು, ಬಳಿಕ ಮೃತದೇಹವನ್ನು ಗಲಗಲಿ ಗ್ರಾಮದ ಸಮೀಪದ ಕೃಷ್ಣಾ ನದಿ ಹಿನ್ನೀರಿನಲ್ಲಿ ಎಸೆಯಲಾಗಿತ್ತು. ಸಿದ್ದಪ್ಪ ಕಾಣೆಯಾಗಿರುವ ಕುರಿತು ಅವರ ಅಕ್ಕಂದಿರು ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಕರಣದ ಹಿಂದೆ ಕೊಲೆಯ ಸಂಶಯ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದ ವಿವರಗಳು ಬೆಳಕಿಗೆ ಬಂದಿವೆ.

ಐವರು ಆರೋಪಿಗಳ ಬಂಧನ;

ಸಿದ್ದಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಂದೆ ಭೀಮಪ್ಪ ಯಮಗಾರ, ಪತ್ನಿ ಶೈಲವ್ವ, ಪುತ್ರರಾದ ಕಾಡಪ್ಪ ಮತ್ತು ರಮೇಶ ಹಾಗೂ ಮಳೆಪ್ಪ ಸಿದ್ದಪ್ಪ ಬೆಳ್ಳುದ್ದಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್‌ ಮಾಹಿತಿ ನೀಡಿದ್ದಾರೆ. ನಗರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆನ್‌ ಝೀಗಳ ದಾರಿತಪ್ಪಿಸುತ್ತಿರುವ ಸಿಜೆಪಿ: ಬಿ.ವೈ. ರಾಘವೇಂದ್ರ
ಅವಳಿ ತಾಲೂಕನ್ನು ದೇಶವೇ ತಿರುಗಿ ನೋಡುವಂತೆ ಮಾಡುವೆ: ವಿಜಯಾನಂದ ಕಾಶಪ್ಪನವರ