ಕನ್ನಡಪ್ರಭ ವಾರ್ತೆ ಮೈಸೂರು
ನಿವೃತ್ತರಿಗೆ ಇಪಿಎಫ್ ಪಿಂಚಣಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಖಂಡಿಸಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಮೈ,ಸೂರಿನ ಗಾಯತ್ರಿಪುರಂನಲ್ಲಿರುವ ಇಪಿಎಫ್ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.1995 ರಲ್ಲಿ ಕೇಂದ್ರ ಸರ್ಕಾರ ಇಪಿಎಫ್ ಕಾಯ್ದೆಗೆ ತಿದ್ದುಪಡಿ ತಂದು ಕುಟುಂಬ ಪಿಂಚಣಿ ಯೋಜನೆ ಬದಲಿಗೆ ಇಪಿಎಫ್ ಕಾಯ್ದೆ ಜಾರಿಗೆ ತಂದಿದೆ. ಆರಂಭದಲ್ಲಿ ದೇಶಾದ್ಯಂತ ಸುಮಾರು 24 ಸಾವಿರಕ್ಕೂ ಹೆಚ್ಚು ಮಂದಿಗೆ ನಿವೃತ್ತರಿಗೆ ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಂಜೂರು ಮಾಡಿ ಕೆಲ ವರ್ಷ ಪಾವತಿಸಿ, ಕೆಲವರಿಗೆ ನಿಲ್ಲಿಸಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಅವರು ಆಗ್ರಹಿಸಿದರು.
ಇಪಿಎಫ್ ಟ್ರಸ್ಟ್ ಗಳ ಮೂಲಕ ನೌಕರರ ವಾಸ್ತವ ವೇತನದ ಮೇಲಿನ ಇಪಿಎಫ್ ಪಿಂಚಣಿ ಕೊಡಲು ಬರುವುದಿಲ್ಲ ಎಂದು 2017 ರಲ್ಲಿ ಸುತ್ತೋಲೆ ಹೊರಡಿಸಿತು. ಈ ಸರ್ವಾಧಿಕಾರಿ ಧೋರಣೆ ಪ್ರಶ್ನಿಸಿ ಹಲವು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಇಪಿಎಫ್ ಕಾಯ್ದೆಗೆ ತಂದ ತಿದ್ದುಪಡಿಯನ್ನು ರದ್ದುಗೊಳಿಸಲಾಗಿದೆ ಎಂದು ಅವರು ಕಿಡಿಕಾರಿದರು.280 ಮಂದಿ ನಿವೃತ್ತ ನೌಕರರು, ಸೇವಾನಿರತ ನೌಕರರು ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಶೀಲಿಸಿದ ಮಂಡ್ಯ ಹಾಲು ಒಕ್ಕೂಟ ಅನುಮೋದನೆ ನೀಡಿತ್ತು. ಆದರೆ, 7- 8 ತಿಂಗಳಾದರೂ ಸೇವೆಯಲ್ಲಿರುವ ಸುಮಾರು 15 ನೌಕರರಿಗೆ ವ್ಯತ್ಯಾಸ ಮೊತ್ತ ಪಾವತಿಗೆ ಬೇಡಿಕೆ ಪತ್ರ ನೀಡಿ, ಅವರಲ್ಲಿ ಕೆಲವರಿಂದ ವ್ಯತ್ಯಾಸ ಮೊತ್ತ ಪಡೆದುಕೊಂಡಿರುವುದನ್ನು ಬಿಟ್ಟರೆ ಇದುವರೆಗೆ ಒಬ್ಬ ನಿವೃತ್ತನಿಗೂ ಬೇಡಿಕೆ ಪತ್ರ ನೀಡಿಲ್ಲ. ಈ ಕುರಿತು ಹಲವು ಬಾರಿ ವಿಚಾರಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಇಪಿಎಫ್ ಸಿಗದೆ ನಿವೃತ್ತರು ಮೃತಪಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಿವೃತ್ತರಾದ ನಮ್ಮ ಕುಟುಂಬ ನಿರ್ವಹಣೆಗೆ ಇಪಿಎಫ್ ಆಧಾರ. 2022ರ ಸುಪ್ರೀಂಕೋರ್ಟ್ ಆದೇಶದ ಅನುದಾರ ಎರಡು ವಾರಗಳ ಒಳಗೆ ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ಅಧ್ಯಕ್ಷ ಬಿ.ಜಿ. ಪೂವಯ್ಯ, ಕಾರ್ಯದರ್ಶಿ ವಿ. ನಾಗರಾಜ್ ಮೊದಲಾದವರು ಇದ್ದರು.