ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ । ಧಾರ್ಮಿಕ ಸಮಾರಂಭ
ಮನುಷ್ಯನ ಹೃದಯಾಳದಿ ಭಗವಂತನು ನೆಲೆಸಿರುವನು. ಎಲ್ಲೆಲ್ಲೋ ತೆರಳಿ ಶೋಧಿಸುವ ಮೊದಲು, ಆತ್ಮದಲ್ಲಿ ಅಡಗಿರುವ ಪರಮಾತ್ಮನೊಟ್ಟಿಗೆ ಸನ್ಮಾರ್ಗದಲ್ಲಿ ಸಾಗಿದಾಗ ಬದುಕು ಸಾತ್ವಿಕ ರೂಪು ಪಡೆದುಕೊಳ್ಳಲಿದೆ ಎಂದು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.
ತಾಲೂಕಿನ ಗಾಣದಾಳು ಗ್ರಾಮದಲ್ಲಿ ಸೋಮವಾರ ನಡೆದ ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ, ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯವಹಿಸಿ ಅಶೀರ್ವಚನ ನೀಡಿದರು.ಭಕ್ತಾದಿಗಳು ಮತ್ತು ಗ್ರಾಮಸ್ಥರು ದೇವಾಲಯ ನಿರ್ಮಾಣ ಅಥವಾ ಜೀರ್ಣೋದ್ದಾರಕ್ಕೆ ಮುಂದಾದರೆ ಸಾಲದು, ದೈನಂದಿನ ಪೂಜಾ ಕೈಂಕರ್ಯಗಳಲ್ಲಿ ತಲ್ಲೀನರಾಗಬೇಕು. ಪ್ರಾರ್ಥನೆ, ಪೂಜೆಯ ಜತೆಗೆ ವೈಮನಸ್ಸಿನ ಕೆಡಕನ್ನು ತೊಡೆದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ದೇವಾಲಯ ನಿರ್ಮಾಣಗೊಂಡಿದ್ದಕ್ಕೆ ಸಾರ್ಥಕವಾದಂತೆ ಎಂದು ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಶ್ರೀ ಮರುಳಸಿದ್ಧರ ಕಾಲಘಟ್ಟದಲ್ಲಿ ಆರ್ಥಿಕ ಸಮಾನತೆ, ಮಹಿಳೆಯರಿಗೆ ಗೌರವಿಸುವುದು, ಕಾಯಕವೇ ಕೈಲಾಸ ಎಂಬುದನ್ನು ವಚನಗಳ ಮುಖಾಂತರ ಸಾರಿ ಸಮಸಮಾಜಕ್ಕೆ ಹೆಜ್ಜೆಯಿಟ್ಟ ಶ್ರೇಷ್ಠರ ದೇವಾಲಯವನ್ನು ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಿರುವ ಗ್ರಾಮಸ್ಥರ ಮನಸ್ಸು ಅತೀವ ದೊಡ್ಡದು ಎಂದು ಹೇಳಿದರು.
ಬಸವತತ್ವ ಪೀಠವು ಕೇವಲ ಚಿಕ್ಕಮಗಳೂರು ತಾಲೂಕಿಗೆ ಸೀಮಿತವಾಗಿತ್ತು. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಗದ್ದುಗೆ ವಹಿಸಿಕೊಂಡ ಬಳಿಕ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಲ್ಲೂ ಪ್ರತೀತಿ ಪಡೆಯುತ್ತಿದೆ. ಮುಂದೆ ಚಿಕ್ಕಮಗಳೂರಿಗೆ ಆಗಮಿಸುವವರು ಶೃಂಗೇರಿ, ರಂಭಾಪುರೀ ಮಠಗಳಿಗೆ ಭೇಟಿ ನೀಡಿದಂತೆ, ಬಸವತತ್ವ ಪೀಠಕ್ಕೆ ಭೇಟಿ ನೀಡುವಂತೆ ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ಉದ್ಯಮಿಗಳಾದ ಬಿ.ಎನ್. ರಾಜಶೇಖರ್, ಬಿ.ಎನ್.ಷಡಾಕ್ಷರಿ, ಸಾಹಿತಿ ಚಟ್ನಹಳ್ಳಿ ಮಹೇಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಶ್ರೀ ಮರುಳಸಿದ್ದೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಎಂ.ರಮೇಶ್, ಉಪಾಧ್ಯಕ್ಷ ಜಿ.ರಮೇಶ್, ಗ್ರಾಮಸ್ಥರಾದ ಚಂದ್ರಶೇಖರ್, ಮಲ್ಲಿಕಾರ್ಜುನ್, ಗಿರೀಶ್, ಎಲ್.ಆರ್.ಈಶ್ವರಪ್ಪ ಇದ್ದರು.