ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧ: ರಂಭಾಪುರಿ ಶ್ರೀ

KannadaprabhaNewsNetwork | Published : Mar 23, 2024 1:13 AM

ಸಾರಾಂಶ

ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಉನ್ನತಿಯಾಗುತ್ತದೆ ಎಂಬ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆ ಎಂದೆಂದಿಗೂ ಸತ್ಯ. ವೀರಶೈವ ಧರ್ಮವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಉನ್ನತಿಯಾಗುತ್ತದೆ ಎಂಬ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆ ಎಂದೆಂದಿಗೂ ಸತ್ಯ. ವೀರಶೈವ ಧರ್ಮವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ರಂಭಾಪುರಿ ಪೀಠದಲ್ಲಿ ಶುಕ್ರವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಜೀವನದಲ್ಲಿ ಸುಖ ಶಾಂತಿ ಯಾವಾಗಲೂ ಬಯಸುತ್ತಾನೆ. ಆ ಸುಖದ ದಾರಿ ಪ್ರಾಪ್ತವಾಗಲು ಆದರ್ಶಗಳನ್ನು ಪರಿಪಾಲಿಸಬೇಕು. ಸುಖ ಸಾಮರಸ್ಯದ ಬಾಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಸರ್ವರಿಗೂ ದಾರಿದೀಪ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಸುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯೊಳಗೆ ಪ್ರೀತಿ ವಾತ್ಸಲ್ಯದ ದೀಪ ಹಚ್ಚಬೇಕು. ಮೌಢ್ಯ ಎಂಬ ಅಂಧಕಾರ ತೊಲಗಿಸಿ ಜ್ಞಾನ ಎಂಬ ದೀಪ ಬೆಳಗಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಶೇಷ ಚೇತನೆ ಬಾಗಲಕೋಟೆ ಡಾ.ಮಹಾಜಬೀನ ಎಸ್.ಮಧುರಕರ ಅವರಿಗೆ 2024ನೇ ಸಾಲಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ರು.1 ಲಕ್ಷ ನಗದು, ಪ್ರಶಸ್ತಿ ಪತ್ರ, ಚಿನ್ನದ ಪದಕ ಒಳಗೊಂಡಿತ್ತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಮಹಾಜಬೀನ ಮಧುರಕರ, 2016ರಲ್ಲಿ ಮೊದಲ ಬಾರಿಗೆ ರಂಭಾಪುರಿ ಜಗದ್ಗುರು ನನಗೆ ಪ್ರಶಸ್ತಿ ನೀಡಿ ಗೌರವಿಸಿದ ನಂತರ ನನ್ನ ಜೀವನದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿದ್ದು, ದಿನಕ್ಕೆ 300ಕ್ಕೂ ಅಧಿಕ ರೋಗಿಗಳನ್ನು ಪರೀಕ್ಷಿಸುವ ಅವಕಾಶ ದೊರೆಯಿತು. ಸಮಾಜಕ್ಕಾಗಿ ಏನಾದರೂ ಕೊಡಬೇಕು ಎಂಬ ಉದ್ದೇಶದಿಂದ ಮಧುರಕರ ಫೌಂಡೇಶನ್ ಟ್ರಸ್ಟ್ ಆರಂಭಿಸಿ ಹಿರಿಯರು, ವಿಶೇಷ ಚೇತನರಿಗೆ ಉಚಿತ ತಪಾಸಣೆ, ಚಿಕಿತ್ಸೆ, ಔಷಧಿ ನೀಡಲಾಗುತ್ತಿದೆ ಎಂದರು.ಕೆಆರ್‌ಇಡಿಎಲ್ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಸಮಾರಂಭ ಉದ್ಘಾಟಿಸಿದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸಂಗಮೇಶ ಉತ್ತಂಗಿ ವಿರಚಿತ ನಾದಲೀಲೆ ಕೃತಿ ಬಿಡುಗಡೆ ಮಾಡಿದರು. ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯರು ಇದ್ದರು. ಲೆಕ್ಕ ಪರಿಶೋಧಕ ಎಂ.ಸದಾಶಿವಪ್ಪ, ಮಮತಾ ನಾಗರಾಜ್ ಕೂಡ್ಲಿಗೆರೆ, ಚಿಕ್ಕಮಗಳೂರಿನ ಎಚ್.ಎಂ.ಲೋಕೇಶ, ಕೆ.ಆರ್.ಪ್ರಕಾಶ್ ಕೋಣಂದೂರು ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ನೇಮಿನಾತ ನಾಯ್ಕ ಶ್ರೀಪೀಠಕ್ಕೆ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ಅಶೀರ್ವಾದ ಪಡೆದರು.

೨೨ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಶಾಸಕ ಟಿ.ಡಿ.ರಾಜೇಗೌಡ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿದರು.೨೨ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ನೀಡುವ ಪ್ರತಿಷ್ಠಿತ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಬಾಗಲಕೋಟೆ ಡಾ.ಮಹಾಜಬೀನ ಎಸ್.ಮಧುರಕರ ಅವರಿಗೆ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು. ಗೌರಿಗದ್ದೆ ಅವಧೂತ ವಿನಯ್ ಗುರೂಜಿ, ಶಾಸಕ ಟಿ.ಡಿ.ರಾಜೇಗೌಡ, ವಿವಿಧ ಶಾಖಾ ಮಠಗಳ ಶಿವಾಚಾರ್ಯರು ಇದ್ದರು.

ಧರ್ಮದ ಭಾವನೆಗೆ ಬೆಲೆ ನೀಡುವುದು ಅಗತ್ಯ: ಅವಧೂತ ವಿನಯ್ ಗುರೂಜಿಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು: ಧರ್ಮಾಚರಣೆಗೆ ಅವಧಿ, ನಿವೃತ್ತಿ ಎಂದಿಗೂ ಸಹ ಇಲ್ಲ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಸಹ ಧರ್ಮದ ಕುರಿತು ಇರುವ ಭಾವನೆಗೆ ಬೆಲೆ ನೀಡುವುದು ಅಗತ್ಯವಾಗಿದೆ ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಹೃದಯ ಹಂಬಲ ನುಡಿಯನ್ನಾಡಿದ ಅವರು, ಗುರು ಎಂದರೆ ಸಾಕ್ಷಾತ್ ಶಿವ. ಗುರುವಿನ ಕಾರುಣ್ಯಕ್ಕೆ ಧರ್ಮ ಬೇಧವಿಲ್ಲವಾಗಿದೆ. ಇದನ್ನು ಸಾಬೀತು ಮಾಡುವುದೇ ಗುರುಪೀಠದ ಧರ್ಮ.ಲಿಂಗ ಪೂಜೆಯ ಮೂಲಕ ಶಿವನನ್ನು ಕೈ ಮೇಲೆ ತಂದಿಟ್ಟಿರುವುದು ಜಗತ್ತಿನಲ್ಲಿ ಮೊದಲು ಜಗದ್ಗುರು ರೇಣುಕಾಚಾರ್ಯ ರಾಗಿದ್ದು, ವೀರಶೈವರಲ್ಲಿ ಪ್ರಾಣ ಗೆಲ್ಲುವ ವಿದ್ಯೆ ಓಂ ನಮಃ ಶಿವಾಯ ಮಂತ್ರ ಅಡಗಿದೆ. ಭಕ್ತರನ್ನು ಎಲ್ಲ ಮನೆಗಳು ಕೈಬಿಟ್ಟಾಗ ಗುರು ಮನೆ ರಕ್ಷಣೆ ಮಾಡಲಿದೆ. ಅದುವೇ ನಿಜವಾದ ದೀಪಾವಳಿಯಾಗಲಿದೆ ನಮ್ಮ ಬದುಕಿನಲ್ಲಿ.ಗುರುಗಳ ಅವಕೃಪೆಯಾದರೆ, ಮನಸ್ಸಿಗೆ ನೋವುಂಟು ಮಾಡಿದರೆ ನಮ್ಮ ಅವನತಿ ಆರಂಭವಾಗಲಿದ್ದು, ಗುರು ನೀಡಿದ ಪ್ರಸಾದ ಕಲ್ಪವೃಕ್ಷದಂತೆ. ಗುರುವನ್ನು ಕಳೆದುಕೊಂಡರೆ ವಜ್ರವನ್ನು ಕಳೆದುಕೊಂಡಂತೆಎಂದರು.

ರಂಭಾಪುರಿ ಜಗದ್ಗುರುಗಳು ಭಾವೈಕ್ಯತೆ ಕೆಲಸ ಮಾಡುತ್ತಿದ್ದು, ಮುಸಲ್ಮಾನ್ ಮಹಿಳೆಗೆ ರೇಣುಕಾಚಾರ್ಯ ಪ್ರಶಸ್ತಿ ನೀಡುವ ಮೂಲಕ ಹಿಂದೂ, ಮುಸ್ಲಿಂ ಎಂದು ಹೊತ್ತಿ ಉರಿಯುತ್ತಿರುವ ದಿನದಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

೨೨ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವದಲ್ಲಿ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಅವರಿಗೆ ರಂಭಾಪುರಿ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವದಿಸಿದರು.

Share this article