ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್ ಬೆಂಬಲಿಗರ ಸಭೆ

KannadaprabhaNewsNetwork |  
Published : Mar 23, 2024, 01:12 AM IST
(ಕೆ.ಎಸ್.ವಿಜಯ್‌ಆನಂದ್- ಅವರ ಹೆಸರಿನಲ್ಲೇ ಫೋಟೊ ಇದೆ) | Kannada Prabha

ಸಾರಾಂಶ

೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ನಿರಾಸೆಗೊಂಡಿದ್ದರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಒತ್ತಡಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ೧೫ ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಇದು ಜೆಡಿಎಸ್ ಸೋಲಿಗೂ ಕಾರಣವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ನಿತ್ಯ ಸಚಿವ ಕೆ.ವಿ. ಶಂಕರಗೌಡರ ಮೊಮ್ಮಗ ಕೆ.ಎಸ್. ವಿಜಯ್‌ ಆನಂದ್ ನಾಳೆ (ಮಾ.೨೪) ಬೆಂಬಲಿಗರು, ಹಿತೈಷಿಗಳ ಸಭೆ ಕರೆದಿದ್ದು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ನಗರದ ಕಲ್ಲಹಳ್ಳಿ ಬಡಾವಣೆಯ ವಿ.ವಿ.ನಗರದಲ್ಲಿರುವ ಹೊಂಬಾಳಮ್ಮ ಫಂಕ್ಷನ್ ಹಾಲ್‌ನಲ್ಲಿ ಬೆಳಗ್ಗೆ ೧೧ ಗಂಟೆಗೆ ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು ಕೆ.ಎಸ್.ವಿಜಯ್ ಆನಂದ್ ವಹಿಸಲಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ನಿರಾಸೆಗೊಂಡಿದ್ದರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಒತ್ತಡಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ೧೫ ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಇದು ಜೆಡಿಎಸ್ ಸೋಲಿಗೂ ಕಾರಣವಾಗಿತ್ತು.

ಆ ನಂತರದಲ್ಲಿ ಪಿಇಟಿ ಕೆ.ಎಸ್.ವಿಜಯ್‌ಆನಂದ್ ಅವರನ್ನು ಕಾಂಗ್ರೆಸ್ ಕಡೆ ಸೆಳೆಯುವುದಕ್ಕೆ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಪ್ರಯತ್ನಗಳು ನಡೆದಿದ್ದವು. ಆದರೆ, ಕೆ.ಎಸ್.ವಿಜಯ್ ಆನಂದ್ ಅದಕ್ಕೆ ಆತುರದ ನಿರ್ಧಾರ ಕೈಗೊಳ್ಳದೆ ತಟಸ್ಥ ಧೋರಣೆ ತಳೆದಿದ್ದರು. ಕೆಲವು ತಿಂಗಳ ಹಿಂದಷ್ಟೇ ಮುನಿಸಿಕೊಂಡಿದ್ದ ಕೆ.ಎಸ್. ವಿಜಯ್‌ಆನಂದ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂಬ ಕಾರಣದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆಗೆ ಆಹ್ವಾನಿಸಿದ್ದರು.

ಅವರ ಆಹ್ವಾನದ ಮೇರೆಗೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಜೆ.ಪಿ.ನಗರ ನಿವಾಸದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ವೇಳೆ ನೀನು ನನ್ನೊಂದಿಗೇ ಇರುವಂತೆ ತಿಳಿಸಿದ್ದರು ಎನ್ನಲಾಗಿದೆ. ಆ ವೇಳೆ ನಾನೊಬ್ಬನೇ ಏಕಾಏಕಿ ತೀರ್ಮಾನ ಮಾಡಲಾಗುವುದಿಲ್ಲ. ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿ ಬಂದಿದ್ದರು ಎನ್ನಲಾಗಿದೆ.

ಅದರಂತೆ ಶನಿವಾರ ಬೆಂಬಲಿಗರ ಸಭೆ ಕರೆದಿರುವ ಕೆ.ಎಸ್.ವಿಜಯ್ ಆನಂದ್ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧರಿಸಲಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ನಗರಸಭೆ ಸದಸ್ಯ ಪೂರ್ಣಚಂದ್ರ, ನಗರಸಭೆಯ ಹಲವು ಸದಸ್ಯರು, ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!