ಬೈಕ್‌ ಸವಾರನ ಸಾವಿಗೆ ಕಾರಣನಾಗಿದ್ದವ್ಯಕ್ತಿಗೆ 1 ವರ್ಷದ ಬದಲು 1 ದಿನ ಜೈಲು

KannadaprabhaNewsNetwork |  
Published : May 11, 2026, 03:30 AM ISTUpdated : May 11, 2026, 08:01 AM IST
 High Court

ಸಾರಾಂಶ

14 ವರ್ಷದ ಹಿಂದೆ ಕಾರು ಟೆಸ್ಟ್ ಡ್ರೈವ್ ವೇಳೆ ಅಪಘಾತ ನಡೆಸಿ ಬೈಕ್ ಸವಾರನ ಸಾವಿಗೆ ಕಾರಣರಾದ ವ್ಯಕ್ತಿಗೆ 78 ವರ್ಷವಾಗಿ ಗಾಲಿ ಕುರ್ಚಿಯಲ್ಲಿ ಜೀವನ ನಡೆಸುತ್ತಿರುವುದನ್ನು‌ ಪರಿಗಣಿಸಿದ ಹೈಕೋರ್ಟ್  1 ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ ಮಾರ್ಪಡಿಸಿ ಮಾನವೀಯತೆ ಮೆರೆದಿದೆ.

ವೆಂಕಟೇಶ್‌ ಕಲಿಪಿ

  ಬೆಂಗಳೂರು :  14 ವರ್ಷದ ಹಿಂದೆ ಕಾರು ಟೆಸ್ಟ್ ಡ್ರೈವ್ ವೇಳೆ ಅಪಘಾತ ನಡೆಸಿ ಬೈಕ್ ಸವಾರನ ಸಾವಿಗೆ ಕಾರಣರಾದ ವ್ಯಕ್ತಿಗೆ 78 ವರ್ಷವಾಗಿ ಗಾಲಿ ಕುರ್ಚಿಯಲ್ಲಿ ಜೀವನ ನಡೆಸುತ್ತಿರುವುದನ್ನು‌ ಪರಿಗಣಿಸಿದ ಹೈಕೋರ್ಟ್, ಆತನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ 1 ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ ಮಾರ್ಪಡಿಸಿ ಮಾನವೀಯತೆ ಮೆರೆದಿದೆ.

ವಿಚಾರಣಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಆರೋಪಿ ಮೈಸೂರಿನ ಸಯ್ಯದ್ ಸೈಫುದ್ದೀನ್ (78) ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಅಪರೂಪದ ಆದೇಶ ಮಾಡಿದೆ.

ಅರ್ಜಿ ಇತ್ತೀಚಿಗೆ ವಿಚಾರಣೆಗೆ ಬಂದಾಗ ಅರ್ಜಿದಾರ ಆರೋಪಿಯು ಗಾಲಿ ಕುರ್ಚಿಯಲ್ಲಿ ಬಂದು ನ್ಯಾಯಾಲಯದ ಮುಂದೆಗೆ ಹಾಜರಾಗಿದ್ದರು. ಪುತ್ರನ ನೆರವಿನಿಂದ ಆರೋಪಿ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ, ಪ್ರಕರಣ ಸಂಬಂಧ ಮೋಟಾರು ವಾಹನ ಅಪಘಾತ ಕ್ಲೇಮು‌ ನ್ಯಾಯಾಧೀಕರಣ ಘೋಷಿಸಿದ ಪರಿಹಾರವಲ್ಲದೇ, ಮೃತನ ಕುಟುಂಬದ ಅವಲಂಬಿತರಿಗೆ 5 ಲಕ್ಷ ರು. ಪರಿಹಾರವನ್ನು ತಾವು ನೀಡುತ್ತೇವೆ. ಅದನ್ನು‌ ಪರಿಗಣಿಸಿ ಜೈಲು ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದರು.

ಈ ಅಂಶ ಪರಿಗಣಿಸಿದ ಹೈಕೋರ್ಟ್, ಘಟನೆಯು 2012ರ ಜು.28ರಂದು ನಡೆದಿದೆ.‌ ಅರ್ಜಿದಾರರು ವಯೋವೃದ್ಧರಾಗಿದ್ದು ಗಾಲಿ ಕುರ್ಚಿಯನ್ನು ಅವಲಂಬಿಸಿದ್ದಾರೆ. ಮತ್ತೊಬ್ಬರ ಸಹಾಯವಿಲ್ಲದೆ ದಿನದ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಾಗೂ ಘಟನೆ ನಡೆದು ನಂತರ ಸಾಕಷ್ಟು ಸಮಯ ಕಳೆದಿರುವ ಕಾರಣ ಅರ್ಜಿದಾರರನ್ನು ಈಗ ಶಿಕ್ಷೆ ಅನುಭವಿಸಲು ಜೈಲಿಗೆ ಕಳಿಸುವುದರಿಂದ ಯಾವುದೇ ಉಪಯುಕ್ತ ಉದ್ದೇಶ ಈಡೇರುವುದಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಿತ್ರ ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡು ಶಿಕ್ಷೆ ಕಡಿತ

ಅರ್ಜಿದಾರರ ಆರೋಗ್ಯ ಪರಿಸ್ಥಿತಿ ಮತ್ತು ಪ್ರಕರಣ ವಿಚಿತ್ರ ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡು 1 ವರ್ಷದ ಜೈಲು ಶಿಕ್ಷೆಯನ್ನು 1 ದಿನಕ್ಕೆ (ನ್ಯಾಯಾಲಯದ ಕಲಾಪ ಅವಧಿ ಮುಗಿಯುವ ಸಮಯದವರೆಗೆ) ಕಡಿತಗೊಳಿಸಿ ಅಧೀನ ನ್ಯಾಯಾಲಯ ಆದೇಶ ಮಾರ್ಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಂತಿಮವಾಗಿ ಮೇ 15ರ ಒಳಗೆ 5 ಲಕ್ಷ ರು.‌ ಪರಿಹಾರವನ್ನು ವಿಚಾರಣಾ ನ್ಯಾಯಾಲಯಕ್ಕೆ ಪಾವತಿಸಬೇಕು. ಆ ನ್ಯಾಯಾಲಯ ಮೃತನ ಅಲವಂಬಿತರನ್ನು ಗುರುತಿಸಿ ಪರಿಹಾರ ಹಣ ಪಾವತಿಸಬೇಕು.‌ ಅರ್ಜಿದಾರರು ಒಂದೊಮ್ಮೆ ಮೇ 15ರೊಳಗೆ ಐದು ಲಕ್ಷ ರು. ಪರಿಹಾರ ಪಾವತಿಸಲು ವಿಫಲವಾದರೆ ವಿಚಾರಣಾ ನ್ಯಾಯಾಲಯದ ಆದೇಶದಂತೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೈಕೋರ್ಟ್ ಆದೇಶಿಸಿ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಪ್ರಕರಣವೇನು?

ಅರ್ಜಿದಾರರು 2012ರ ಜು.28ರಂದು ಕಾರನ್ನು ಟೆಸ್ಟ್ ಡ್ರೈವ್ ಮಾಡುತ್ತಿದ್ದಾಗ ಬೈಕ್ ಸವಾರರಿಗೆ ಢಿಕ್ಕಿ ಹೊಡೆದಿದ್ದರು.‌ ಈ ಅಪಘಾತದಿಂದ ಸವಾರ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿ ತನಿಖೆ ಪೂರ್ಣಗೊಳಿಸಿದ ನರಸಿಂಹರಾಜ ಸಂಚಾರ ಠಾಣಾ‌ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಮೈಸೂರಿನ 3ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯವು ಸೈಫುದ್ದೀನ್ ಅವರನ್ನು ಭಾರತೀಯ ದಂಡ ಸಂಹಿತೆ ವಿವಿಧ ಕಲಂ ಅಡಿ ದೋಷಿಯಾಗಿ ತೀರ್ಮಾನಿಸಿತ್ತು. ಜೊತೆಗೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ 2018ರ ಮಾ.26ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸೈಫುದ್ದೀನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ 2ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಸಿಜೆಎಂ ನ್ಯಾಯಾಲಯದ ಆದೇಶ ಪುರಸ್ಕರಿಸಿ 2018ರ ಆ.9ರಂದು ಆದೇಶಿಸಿತ್ತು. ಇದರಿಂದ ಸೈಫುದ್ದೀನ್ ಅವರು ಹೈಕೋರ್ಟ್ ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನನ್ನ, ಡಿಕೆಶಿ ನಡುವೆ ವ್ಯವಹಾರಿಕ ಸಂಬಂಧವಿಲ್ಲ: ಬಿವೈವಿ
ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಕ್ಲಾಸ್‌