ಮಾರ್ಚ್‌ 28ರಂದು ತೆರೆ ಮೇಲೆ ಮನದ ಕಡಲು ಚಲನಚಿತ್ರ: ಯೋಗರಾಜ್‌ ಭಟ್‌

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ಸುಮಾರು 18 ವರ್ಷದ ಬಳಿಕ ಇ.ಕೃಷ್ಣಪ್ಪರ ಜೊತೆ ಸೇರಿ ನಿರ್ದೇಶನ ಮಾಡಿರುವ ಮನದ ಕಡಲು ಸಿನಿಮಾ ಮಾ.18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ತಿಳಿಸಿದರು.

ರಾಜ್ಯಾದ್ಯಂತ ಬಿಡುಗಡೆ । ಚಿತ್ರದ ನಿರ್ದೇಶಕ ಮಾಹಿತಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸುಮಾರು 18 ವರ್ಷದ ಬಳಿಕ ಇ.ಕೃಷ್ಣಪ್ಪರ ಜೊತೆ ಸೇರಿ ನಿರ್ದೇಶನ ಮಾಡಿರುವ ಮನದ ಕಡಲು ಸಿನಿಮಾ ಮಾ.18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 18 ವರ್ಷಗಳ ಹಿಂದೆ ನಿರ್ದೇಶಿಸಿದ್ದ ಮುಂಗಾರು ಮಳೆ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆಯನ್ನೇ ಸೃಷ್ಟಿಸಿತ್ತು. ಅಂತಹದ್ದೆ ಒಂದು ಹೊಸ ಪ್ರೇಮಕಥೆಯನ್ನು ಮನದ ಕಡಲು ಹೊಂದಿದೆ ಎಂದು ಮಾಹಿತಿ ನೀಡಿದರು.

ಈ ಚಿತ್ರಕ್ಕೆ ಬಹಳ ಸಮಯದ ಹಿಂದೆಯೇ ನಾನು ಕಥೆಯನ್ನು ಬರೆದು ರೆಡಿ ಮಾಡಿ ಇಟ್ಟುಕೊಂಡಿದ್ದೆ. ಆದರೆ, ಆ ಕಥೆಗೆ ಒಪ್ಪುವಂತಹ ನಾಯಕ ನನಗೆ ಸಿಕ್ಕಿರಲಿಲ್ಲ. ಈ ಕಥೆಗೆ 20 ವಯಸ್ಸಿನ ಆಸುಪಾಸಿನ ನಾಯಕನ ಅವಶ್ಯಕತೆ ಇತ್ತು. ತುಂಬಾ ಸಮಯದ ನಂತರ ಸುಮುಖ ಚಿತ್ರದ ನಾಯಕನ ಪಾತ್ರಕ್ಕೆ ಉತ್ತಮ ಆಯ್ಕೆ ಎಂದೆನಿಸಿ ಆತನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಇ.ಕೆ ಎಂಟರ್ಟೈನರ್ಸ್ ಬ್ಯಾನರ್‌ನಲ್ಲಿ ಇ.ಕೃಷ್ಣಪ್ಪ ಅವರು ನಿರ್ಮಾಣ ಮಾಡಿದ್ದಾರೆ. ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಉತ್ತಮ ಪ್ರೇಮ ಕಥೆಯೊಂದಿಗೆ ಮುಂಗಾರುಮಳೆ ಹೇಗೆ ಸಿನಿ ರಸಿಕರ ಮನ ಗೆದ್ದಿತ್ತೋ ಅದೇ ರೀತಿ ಈ ಸಿನಿಮಾವು ಜನರ ಮನ ಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು.ಮಳೆಯ ತವರುಮನೆಯೇ ಕಡಲು. ಆ ಕಡಲಿನ ಮಿಡಿತವನ್ನು ಅಲೆಗಳ ಅಬ್ಬರಗಳನ್ನು ಪ್ರೇಮಕ್ಕೆ ಸಮೀಕರಿಸಿ ಪ್ರೇಮವನ್ನು ಮತ್ತೊಂದು ಬಗೆಯಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದು ಇತ್ತೀಚೆಗೆ ಕಡಿಮೆಯಾಗಿದೆ. ಆದರೆ, ನನಗೆ ನಂಬಿಕೆ ಇದೆ. ನನ್ನ ನಿರ್ದೇಶನದ ಈ ಚಿತ್ರವನ್ನು ಖಂಡಿತ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಬಂದೇ ನೋಡುತ್ತಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಫೀಲ್ ಬೇರೆಯದೇ ಆಗಿರುತ್ತದೆ ಎಂದರು.ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ೬ ಹಾಡುಗಳಿವೆ. ಮೂವರು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕ ನಟ ಸುಮುಖ, ನಟಿ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ ಎಂದರು.ಚಿತ್ರದ ನಾಯಕ ಸುಮುಖ ಮಾತನಾಡಿ, ನನಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ ಬಹಳಾ ಇಷ್ಟ. ನಾನು ಈ ಹಿಂದೆ ಫಿಸಿಕ್ಸ್ ಟೇಚರ್ ಎಂಬ ಒಂದು ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದೆ. ಅದು ಜನರಿಂದ ಉತ್ತಮ ಪ್ರಶಂಸೆಯನ್ನು ಪಡೆದಿತ್ತು. ಇದೀಗ ಮನದ ಕಡಲು ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಟಿ ರಾಶಿಕಾ ಶೆಟ್ಟಿ, ಚಿತ್ರದ ಪ್ರಮೋಟರ್ ಶ್ರೀಧರ್ ಇದ್ದರು.

Share this article