ಗದಗ: ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಪಂ ಸಿಇಒ ಭರತ್.ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಪೀಡಿತವಾಗುವ ಗ್ರಾಮಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸೂಚಿಸಬೇಕು. ಅಲ್ಲದೇ ಜನಜಾನುವಾರು ಹಾನಿಯಾಗದಂತೆ ತಡೆಯಲು ಪ್ರಥಮಾದ್ಯತೆ ನೀಡಬೇಕು ಎಂದು ತಹಸೀಲ್ದಾರರಿಗೆ ಪ್ರವಾಹ ಪೀಡಿತ ಪ್ರದೇಶ ವೀಕ್ಷಣಾ ಸಮಯದಲ್ಲಿ ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್.ಎಸ್ ಮಾತನಾಡಿ, ಸಾರ್ವಜನಿಕರು ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಮಾಡದಿರುವಂತೆ ತಿಳಿ ಹೇಳಬೇಕು. ಅಲ್ಲದೇ ವಿದ್ಯುತ್ ಕಂಬಗಳ ಹತ್ತಿರ ಹಾಗೂ ನದಿ ಪಾತ್ರದ ಹತ್ತಿರ ಜನಜಾನುವಾರು ಸುಳಿಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಜಾಗೃತಿ ಮೂಡಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ತಾಲೂಕಾಡಳಿತ ಹಾಗೂ ಜಿಲ್ಲಾಡಳಿತದೊಂದಿಗೆ ನಿರಂತರ ಸಮನ್ವಯ ಸಾಧಿಸುವಂತೆ ತಿಳಿಸಿದರು.ಬೆಳೆ ಹಾನಿ ಪ್ರದೇಶಕ್ಕೆ ಭೇಟಿ: ನರಗುಂದ ಹಾಗೂ ರೋಣ ತಾಲೂಕುಗಳ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ವಯ ಬೆಳೆ ಹಾನಿಗೊಳಗಾದ ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ಒದಗಿಸಲು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದರು.
ನರಗುಂದ ಹಾಗೂ ರೋಣ ತಾಲೂಕಿನ ಬೆಳೆಹಾನಿ ಪ್ರದೇಶಗಳಾದ ಹದಲಿ, ಮೆಣಸಗಿ, ಯಾವಗಲ್, ಬನಹಟ್ಟಿ, ಸುರಕೋಡ, ಹೊಳೆಆಲೂರು ಸೇರಿದಂತೆ ಇನ್ನಿತರೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.ಈ ವೇಳೆ ನರಗುಂದ ತಹಸೀಲ್ದಾರ್ ಶ್ರೀಶೈಲ ತಳವಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಜಾನಮಟ್ಟಿ, ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ. ಬ್ಯಾಗಿ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.
ಮಲಪ್ರಭಾನೀರಿನ ಮಟ್ಟ:ಮಲಪ್ರಭಾ ನದಿ (ರೇಣುಕಾ ಸಾಗರ) ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ–37.731 ಟಿಎಂಸಿ ಇದ್ದು, ಶುಕ್ರವಾರ ಬೆಳಗ್ಗೆ 37.731 ಟಿಎಂಸಿ ತಲುಪಿದೆ. ನದಿಯ ಒಳಹರಿವು 8,694 ಕ್ಯೂಸೆಕ್ ಇದ್ದು, ಹೊರಹರಿವು 8,694 ಕ್ಯೂಸೆಕ್ ಇದೆ.