ಶಿಗ್ಗಾವಿ ಉಪಚುನಾವಣೆ : ಭರತ್ ಬೊಮ್ಮಾಯಿ ಪರ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಬ್ಯಾಟಿಂಗ್‌

KannadaprabhaNewsNetwork |  
Published : Oct 19, 2024, 12:36 AM ISTUpdated : Oct 19, 2024, 12:06 PM IST
arvind bellad

ಸಾರಾಂಶ

ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಪರವಾಗಿ ಜನರ ಒಲವು ಇದೆ ಎಂಬುದು ಸ್ಥಳೀಯವಾಗಿ ಸಂಚರಿಸಿದಾಗ ಕಂಡು ಬಂದಿದೆ. ಅವರೇ ಅಭ್ಯರ್ಥಿಯಾದರೆ ಸುಲಭ ಗೆಲವು‌ ಸಾಧಿಸಬಹುದು ಎಂದು ಜನರು ಹೇಳುತ್ತಿದ್ದಾರೆ. ಹೀಗಾಗಿ ಅವರಿಗೆ ಕೊಟ್ಟರೆ ಪಕ್ಷದ ಗೆಲವು ಸುಲಭವಾಗುತ್ತದೆ.

ಹುಬ್ಬಳ್ಳಿ:  ಶಿಗ್ಗಾವಿ-ಸವಣೂರು ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕು ಎಂಬುದರ ಕುರಿತು ಇನ್ನು ನಿರ್ಧಾರವಾಗಿಲ್ಲ. ಆದರೆ ಶಾಸಕರೂ ಆಗಿರುವ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು, ಭರತ್‌ ಬೊಮ್ಮಾಯಿ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ಸಂಸದ ಬಸವರಾಜ ಬೊಮ್ಮಾಯಿ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಪರವಾಗಿ ಜನರ ಒಲವು ಇದೆ ಎಂಬುದು ಸ್ಥಳೀಯವಾಗಿ ಸಂಚರಿಸಿದಾಗ ಕಂಡು ಬಂದಿದೆ. ಅವರೇ ಅಭ್ಯರ್ಥಿಯಾದರೆ ಸುಲಭ ಗೆಲವು‌ ಸಾಧಿಸಬಹುದು ಎಂದು ಜನರು ಹೇಳುತ್ತಿದ್ದಾರೆ. ಹೀಗಾಗಿ ಅವರಿಗೆ ಕೊಟ್ಟರೆ ಪಕ್ಷದ ಗೆಲವು ಸುಲಭವಾಗುತ್ತದೆ. ಆದರೆ, ಅಂತಿಮವಾಗಿ ಹೈಕಮಾಂಡ್‌ ಯಾರ ಹೆಸರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತದೆ. ಅದಕ್ಕೆ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಬದ್ಧರಾಗಬೇಕು ಎಂದರು.

ರಾಜ್ಯದಲ್ಲಿ ಮೂರು ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ಉಪಚುನಾವಣೆ ಚರ್ಚೆ ಜೋರಾಗಿದೆ. ಈ ನಡುವೆ ಯಾರು ಅಭ್ಯರ್ಥಿ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮೂರು ಕ್ಷೇತ್ರ ಸೇರಿ ಈಗಾಗಲೇ 60ಕ್ಕೂ ಹೆಚ್ಚು ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡತ್ತಾರೆ ಕಾದು ನೋಡಬೇಕು ಎಂದು ಹೇಳಿದರು.

ಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ, ಸಂಸದರ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಾಯದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ಚುನಾವಣೆಯಲ್ಲಿ ಗೆಲುವೊಂದೇ ಮುಖ್ಯ. ಇದಲ್ಲದೆ ಜನರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಸ್ವತಃ ಬಸವರಾಜ ಬೊಮ್ಮಾಯಿ ಅವರು ತಮ್ಮ ಮಗ ಅಭ್ಯರ್ಥಿ ಅಲ್ಲ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ಧವಾಗಬೇಕು ಎಂದು ತಿಳಿಸಿದರು.

ಶಿಗ್ಗಾವಿ ಉಪಚುನಾವಣೆಗೆ ರಾಜ್ಯ ಕೋರ್ ಕಮಿಟಿ ಮೂವರ ಹೆಸರು ಕಳುಹಿಸಿದೆ. ಶ್ರೀಕಾಂತ್ ದುಂಡಿಗೌಡ್ರ, ಶಶಿ ಯಲಿಗಾರ ಹಾಗೂ ಶಿಗ್ಗಾವಿ ತಾಲೂಕು ಬಿಜೆಪಿ ಅಧ್ಯಕ್ಷ ಮ್ಯಾಗೇರಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದರು.

ಮಾಜಿ ಸಚಿವ ಮುರುಗೇಶ ನಿರಾಣಿ ಶಿಗ್ಗಾವಿ ಅಭ್ಯರ್ಥಿ‌ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಬೆಲ್ಲದ, ನಿರಾಣಿ ಅವರು ಉಪಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಆಸಕ್ತಿ ಹೊಂದಿಲ್ಲ. ಈಗಾಗಲೇ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಯೋಗಿ ಇರಲಿ:

ಚನ್ನಪಟ್ಟಣದ ಉಪಚುನಾವಣೆಗೆ ಸಿ.ಪಿ. ಯೋಗೇಶ್ವರ ಎನ್‌ಡಿಎ ಅಭ್ಯರ್ಥಿಯಾಗಲಿ ಎಂಬುದು ಪಕ್ಷದ ನಿಲುವು. ಅವರಿಗೆ ಸಹಕರಿಸುವಂತೆ ಎಚ್‌ಡಿಕೆ ಅವರನ್ನು ಮನವೊಲಿಸಲು ಪ್ರಯತ್ನ ಮಾಡುತ್ತೇವೆ. ಅವರ ನಿರ್ಧಾರವೂ ಮುಖ್ಯವಾಗುತ್ತದೆ ಎಂದು ತಿಳಿಸಿದರು.

25ರಂದು ಪ್ರತಿಭಟನೆ:

ಹಳೇಹುಬ್ಬಳ್ಳಿ ಗಲಭೆ ಪ್ರಕರಣ‌ ವಾಪಸ್ ಪಡೆದ ಸರ್ಕಾರದ ಕ್ರಮ ಖಂಡಿಸಿ ಅ. 25ರಂದು ರಾಜ್ಯದ ಪ್ರಮುಖರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಅಂದಾಜು 25 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಜೋಶಿ ಬ್ರದರ್ ಪಕ್ಷಕ್ಕೂ ಸಂಬಂಧವಿಲ್ಲ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೂ ಮತ್ತು ಅವರ ಸಹೋದರ ಗೋಪಾಲ ಜೋಶಿ ಮಧ್ಯೆ ಸಂಬಂಧ ಸರಿಯಿಲ್ಲ. ಗೋಪಾಲ ಜೋಶಿ ಬಿಜೆಪಿ ಪಕ್ಷಕ್ಕೆ ಸಂಬಂಧವಿಲ್ಲ ಎಂದು ಹೇಳಿದ ಅರವಿಂದ ಬೆಲ್ಲದ, ಗೋಪಾಲ ಜೋಶಿ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ