ನೀರಿನ ಸೂಕ್ತ ನಿರ್ವಹಣೆ ಮಾಡಿ: ತಹಶೀಲ್ದಾರ್ ನರಸಪ್ಪ

KannadaprabhaNewsNetwork |  
Published : Apr 26, 2026, 03:30 AM IST
ಕುರುಗೋಡು ೦೧ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲ್ಲೂಕು ಕಾರ್ಯಪಡೆ ಸಮಿತಿ ಸಭೆ ಶುಕ್ರÀವಾರ ಜರುಗಿತು | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ಕೆಳಮಟ್ಟದ ಕಾಲುವೆಗೆ ನೀರು ಬಿಟ್ಟಿದ್ದಾರೆ.

ಕುರುಗೋಡು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಇಮ್ಮಡಿಗೊಳ್ಳುತ್ತಿದೆ. ಪಟ್ಟಣವೂ ಸೇರಿದಂತೆ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ನರಸಪ್ಪ ಸೂಚಿಸಿದರು.

ಇಲ್ಲಿನ ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಜರುಗಿದ ತಾಲೂಕು ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತುಂಗಭದ್ರಾ ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ಕೆಳಮಟ್ಟದ ಕಾಲುವೆಗೆ ನೀರು ಬಿಟ್ಟಿದ್ದಾರೆ. ಖಾಲಿಯಾದ ಕುಡಿಯುವ ನೀರಿನ ಕೆರೆಗಳನ್ನು ಶೀಘ್ರವಾಗಿ ತುಂಬಿಸುವ ಕಾರ್ಯ ಮಾಡಬೇಕು. ಅಗತ್ಯಬಿದ್ದರೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಿ. ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಿದೆ ಎಂದು ವರದಿ ಬಂದ ನಂತರ ಸರಬರಾಜು ಮಾಡಬೇಕು. ಇಲ್ಲವಾದರೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ತಯಾರಿ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಾನುವಾರುಗಳಿಗೆ ಮೇವು, ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಾಂತಿ ಭೇದಿ, ಮಲೇರಿಯಾ, ಡೆಂಘೀ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಸಮಯದಲ್ಲಿ ಅನಗತ್ಯವಾಗಿ ಜನರು ಮನೆಯಿಂದ ಹೊರಬಾರದಂತೆ ಮತ್ತು ಅನಾರೋಗ್ಯಕ್ಕೆ ತುತ್ತಾಗದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಚಾರ ನಡೆಸಬೇಕು ಎಂದು ಆರೋಗ್ಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆಯಲ್ಲಿ ತಲೆದೂರಬಹುದಾದ ಕಾಯಿಲೆಗಳ ಚಿಕಿತ್ಸೆಗೆ ತಾಲೂಕು ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿ ಸಂಗ್ರಹದ ಬಗ್ಗೆ ನಿಗಾ ವಹಿಸಬೇಕು. ಕೇಂದ್ರಗಳ ಸ್ವಚ್ಛತೆ, ಅಂಗನವಾಡಿ ಮತ್ತು ಕೂಸಿನ ಮನೆಗಳ ಸ್ವಚ್ಛತೆ ಮತ್ತು ಮಕ್ಕಳಿಗೆ ಶುದ್ಧ ಕುಡಿಯುವ ನೀರು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನೀರು ಸರಬರಾಜಿಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಮಾರ್ಗದಲ್ಲಿ ತೊಂದರೆ ಕಂಡುಬಂದರೆ ಕೂಡಲೇ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು. ಗಾಳಿ-ಮಳೆಗೆ ವಿದ್ಯುತ್ ಕಂಬ ಮತ್ತು ತಂತಿ ತುಂಡಾಗಿ ಬಿದ್ದು ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ವಿದ್ಯುತ್ ಪರಿವರ್ತಕ, ಕಂಬ ಮತ್ತು ತಂತಿ ಬದಲಿಸಲು ಕ್ರಮ ಕೈಗೊಳ್ಳಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಮೇ ತಿಂಗಳಲ್ಲಿ ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ಮತ್ತು ಮೆಣಸಿನಕಾಯಿ ಸಸಿ ನರ್ಸರಿ ಮಾಲೀಕರ ಸಭೆ ಕರೆಯುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಜೆ.ಇ. ಮೇಘನಾ, ಜೆಸ್ಕಾಂ ಎಇಇ ರಾಜೇಂದ್ರ ಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಮಂಜುನಾಥ ಜವಳಿ, ನೈರ್ಮಲ್ಯ ಮತ್ತು ನೀರು ಸರಬರಾಜು ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಸಂಸ್ಥಾನ ಅಯೋಧ್ಯೆ ಶಾಖಾ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ನಳಿನ್‌
ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಹೆಚ್ಚಳ: ಡಾ. ಮಂತರ್ ಗೌಡ