ಕನ್ನಡಪ್ರಭ ವಾರ್ತೆ ಸೊರಬ
ಸಹಕಾರ ಮನೋಭಾವ ಮತ್ತು ಪರಸ್ಪರ ನಂಬಿಕೆಯ ಅಡಿಯಲ್ಲಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬದುಕಿಗೆ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕವಾಗಿದೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.ಬುಧವಾರ ತಾಲೂಕಿನ ಚಂದ್ರಗುತ್ತಿ ಗ್ರಾಮದ ರೇಣುಕಾಂಬಾ ಕಲ್ಯಾಣ ಮಂಟಪದಲ್ಲಿ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆಯ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಇರುವ ಚಂದ್ರಗುತ್ತಿ ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ರೈತರು, ಉದ್ದಿಮೆದಾರರು, ವರ್ತಕರು ಹಾಗೂ ಸಾರ್ವಜನಿಕರ ವೃತ್ತಿಯ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಅಗತ್ಯವಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಆರಂಭವಾಗುತ್ತಿರುವ ಸಂಸ್ಥೆ ಆದರ್ಶವಾಗಿರಬೇಕು. ಸದಸ್ಯರು ವ್ಯವಸ್ಥೆಯನ್ನು ಸದ್ಭಳಕೆ ಮಾಡಿಕೊಂಡು ಉನ್ನತಿ ಹೊಂದಬೇಕು ಹಾಗೂ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.ತಾಪಂ ಮಾಜಿ ಸದಸ್ಯ ಎಚ್.ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಆರಂಭದ ಹೊಸ್ತಿಲಲ್ಲಿ ಕೇವಲ ಲಾಭದಾಸೆಗೆ ಮುಂದಾಗದೇ ಸೇವೆ ಒದಗಿಸಬೇಕು. ಖಾಸಗಿ ಲೇವಾದೇವಿ ವ್ಯವಹಾರಕ್ಕೆ ಸಹಕಾರ ಕ್ಷೇತ್ರದಿಂದ ಕಡಿವಾಣ ಹಾಕಲು ಸಾಧ್ಯವಿದೆ. ಸಂಸ್ಥೆಯು ಹಣಕಾಸು ವಹಿವಾಟು ಆರಂಭವಾದ ತರುವಾಯ ಸದಸ್ಯರಲ್ಲಿಯೂ ಗೌರವಯುತ ಬದುಕು ಕಾಣುವಂತಾಗಬೇಕು. ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಸ್ಥೆಯು ಉನ್ನತಿ ಕಾಣಲು ಸಾಧ್ಯವಾಗುತ್ತದೆ. ಚಂದ್ರಗುತ್ತಿಯು ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗಿರುವುದು ಸ್ವಾಗತಾರ್ಹ ವಿಷಯ ಎಂದರು.
ಸಮಾಜ ಸೇವಕ ವಿನಾಯಕ ಸಿ.ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ್ ಡಿ.ನಾಯ್ಕ್, ತಾಪಂ ಮಾಜಿ ಸದಸ್ಯ ಎನ್.ಜಿ.ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಶೆಣೈ, ಪ್ರಮುಖರಾದ ಈಶ್ವರ ಚನ್ನಪಟ್ಟಣ, ಮರೆಪ್ಪ ಬೆನ್ನೂರು, ಉಮಾಪತಿ, ಪ್ರಶಾಂತ್ ಶೇಟ್, ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ರಾಘವೇಂದ್ರ ಡಿ.ನಾಯ್ಕ್, ಎಚ್. ಶಾಂತಾ, ಸಿಬ್ಬಂದಿ ಅಮರ್ ಜೋಗಳೇಕರ್, ರೋಮಿತ್ ವಿ. ನಾಯ್ಕ್, ಎನ್.ವಿ. ಆಶ್ರಿತಾ ಸೇರಿದಂತೆ ಮತ್ತಿತರರಿದ್ದರು.