ಮಕ್ಕಳನ್ನು ನಿರ್ವಹಿಸುವುದು ಇಂದಿನ ಪ್ರಮುಖ ಸವಾಲು: ವಿನಯಾ ಒಕ್ಕುಂದ

KannadaprabhaNewsNetwork |  
Published : Apr 29, 2024, 01:32 AM IST
28ಡಿಡಬ್ಲೂಡಿ8ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ‘ಚಿಲಿಪಿಲಿ ಕಲರವ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳಿಂದ ನೃತ್ಯ ನಡೆಯಿತು.  | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಮಕ್ಕಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಯಾವುದು ಕೆಟ್ಟದ್ದು, ಯಾವುದು ಸರಿ ಎಂದು ತಿಳಿದುಕೊಳ್ಳುವ ವ್ಯವಧಾನ ಇಲ್ಲದಾಗಿದೆ ಎಂದು ಪ್ರಾಧ್ಯಾಪಕಿ ವಿನಯಾ ಒಕ್ಕುಂದ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಮಕ್ಕಳನ್ನು ನೋಡಿಕೊಳ್ಳುವುದು ಒಂದು ಸವಾಲಿನ ಕಾರ್ಯವಾಗಿದೆ ಎಂದು ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ವಿನಯಾ ಒಕ್ಕುಂದ ಹೇಳಿದರು.

ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ‘ಚಿಲಿಪಿಲಿ ಕಲರವ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಮಕ್ಕಳ ಮೇಲೆ ತುಂಬಾ ಒತ್ತಡವಿದೆ ಎಂಬುದನ್ನು ಪಾಲಕರು ಅರ್ಥಮಾಡಿಕೊಳ್ಳಬೇಕು. ಮಕ್ಕಳಿಗೆ ಯೋಚನೆ ಮಾಡುವ ಅವಕಾಶವೇ ಇಲ್ಲದಾಗಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಯಾವುದು ಕೆಟ್ಟದ್ದು, ಯಾವುದು ಸರಿ ಎಂದು ತಿಳಿದುಕೊಳ್ಳುವ ವ್ಯವಧಾನ ಇಲ್ಲದಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದನ್ನೆ ಬಿಡುವಂತಹ ರೋಗಗ್ರಸ್ತ ಸಮಾಜದಲ್ಲಿ ನಾವಿದ್ದೇವೆ. ಇಂಥ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಒಟ್ಟಿಗೆ ಬಾಳುವ, ಸಹಬಾಳ್ವೆಯಿಂದ ನಡೆದುಕೊಳ್ಳುವ ಗುಣಗಳನ್ನು ಕಟ್ಟಿಕೊಡಬೇಕಾಗಿದೆ ಎಂದರು.

ಮಕ್ಕಳನ್ನು ಸಾಕಿ ಸಲುಹುವ ಅತ್ಯಂತ ಕಠಿಣ ಜವಾಬ್ದಾರಿಯನ್ನು ಸಮಾಜ ಮಹಿಳೆಯರಿಗೆ ನೀಡಿದ್ದು, ಅದನ್ನು ಸಮರ್ಥವಾಗಿ ಎಷ್ಟೇ ಮಕ್ಕಳಾದರೂ ನಿಭಾಯಿಸುತ್ತಾ ಮಹಿಳಾ ಲೋಕ ಬಂದಿದೆ. ನಾವು ವಿಮಾನ ತಯಾರು ಮಾಡುವುದರಿಂದ ಹಿಡಿದು ಎಲ್ಲ ವಸ್ತುವನ್ನು ತಯಾರು ಮಾಡಬಹುದು. ಆದರೆ, ಒಂದು ಮಗುವನ್ನು ಮನುಷ್ಯರನ್ನಾಗಿ ಬೆಳೆಸುವಂತಹ ಜಗತ್ತಿನ ಅತ್ಯಂತ ಕಠಿಣ ಕೆಲಸವನ್ನು ತಾಯಂದಿರು ಮಾಡುತ್ತಾ ಬಂದಿದ್ದಾರೆ. ಕುಟುಂಬವು ಮಕ್ಕಳ ಅರೋಗ್ಯ, ಹಸಿವನ್ನು ನೀಗಿಸಿ ದೈಹಿಕ ಬೆಳವಣಿಗೆಗೆ ಲಕ್ಷ ಕೊಡುತ್ತಾರೆ. ಶಾಲೆಯಲ್ಲಿ ಮಕ್ಕಳು ಇಂಗ್ಲೀಷ, ಗಣಿತ, ಇತಿಹಾಸ, ವಿಜ್ಞಾನ ಪಠ್ಯವಾಗಿ ಕಲಿಸುತ್ತಾ, ಇಲ್ಲಿ ಬೌದ್ಧಿಕವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತಾರೆ. ಆದರೆ ಮನುಷ್ಯತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕುಟುಂಬ ಮತ್ತು ಶಾಲೆಗಳು ಎರಡೂ ಹಿಮ್ಮುಖವಾಗಿವೆ. ಇದರ ಪರಿಣಾಮ ಇಂದು ಸಮಾಜದಲ್ಲಿ ಯುವಕರ ಮನಸ್ಥಿತಿ ನೋಡುತ್ತೇವೆ. ಅತ್ಯಂತ ಬುದ್ಧಿವಂತ ಮಕ್ಕಳು ಇಂದು ಇದ್ದರೂ ಅವರಲ್ಲಿ ಮನುಷ್ಯತ್ವ ಗುಣ ಇರುವುದಿಲ್ಲ. ಇಂಥ ಮನುಷ್ಯತ್ವ, ಭಾವನಾತ್ಮಕ, ಸಹಬಾಳ್ವೆಯ ಪರಿಕಲ್ಪನೆಯನ್ನು ಇಂಥ ಮಕ್ಕಳ ಶಿಬಿರಗಳು ಕಟ್ಟಿಕೊಡುತ್ತಿರುವುದು ಅಭಿನಂದನೀಯ ಎಂದರು.

ಬಿಎಸ್.ಎನ್.ಎಲ್ ನಿವೃತ್ತ ಅಧಿಕಾರಿ ಯಲ್ಲಪ್ಪ ಬೆಂಡಿಗೇರಿ, ಟೆಲಿಕಾಂ ಅಧಿಕಾರಿ ಶಿಲ್ಪಾರಾಣಿ ಚೆಲ್ಲೂರ, ಎಲ್‌ಐಸಿ ಅಧಿಕಾರಿ ಆಕಾಶ ಹುಬ್ಬಳ್ಳಿ ಇದ್ದರು. ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿದರು. ಕೆ.ಎಚ್. ನಾಯಕ, ಡಾ. ಬಾಳಪ್ಪಾ ಚಿನಗುಡಿ, ಸಿಕಂದರ ದಂಡಿನ ಮತ್ತಿತರರುಇದ್ದರು. ಮಕ್ಕಳಿಂದ ನಾಟಕ, ನೃತ್ಯ, ಹಾಡುಗಳು ಪ್ರದರ್ಶನಗೊಂಡವು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ