ಕನ್ನಡಪ್ರಭ ವಾರ್ತೆ ಮೈಸೂರುಕೆಲವರ ಬಳಿಯೇ ಆರ್ಥಿಕತೆ ಇರುವಂತೆ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಹಿಂದಕ್ಕೆ ಹೋಗುವುದನ್ನೆ ಸುವರ್ಣ ಯುಗ ಎನ್ನಲಾಗುತ್ತಿದ್ದು, ಹಿಂದುಳಿದ ಜಾತಿಗಳು ಜಾಗತೀಕರಣದ ಲಾಭ ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ರಾಯಚೂರು ಸಂಸದ ಜಿ. ಕುಮಾರ್ ನಾಯಕ್ ಕಳವಳ ವ್ಯಕ್ತಪಡಿಸಿದರು.ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರವು ಗುರುವಾರ ಹಮ್ಮಿಕೊಂಡಿದ್ದ ಪೂನಾ ಒಪ್ಪಂದದ ಅಂಗವಾಗಿ 8 ದಶಕಗಳ ಸ್ವಾತಂತ್ರ್ಯ ಭಾರತದಲ್ಲಿ ಕರ್ನಾಟಕದ ಪ.ಜಾತಿ, ಪ.ಪಂಗಡಗಳ ಪ್ರಗತಿಯ ಪರಿಶೀಲನೆ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಜಾತಿ ವ್ಯವಸ್ಥೆಯಿಂದ ಶೇ. 20 ಜನರ ಬಳಿ ಆರ್ಥಿಕ ವ್ಯವಸ್ಥೆಯ ಬಿಗಿ ಹಿಡಿತವಿದೆ. ಶೇ. 80ರಷ್ಟು ಜನರು ಬದುಕಿಗಾಗಿ ಹೋರಾಟ ನಡೆಸಬೇಕಿದೆ. ನಾವು ಸಮಾನತೆಗಾಗಿ ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ. ಕೆಲವರ ಅಭಿವೃದ್ಧಿಯನ್ನೇ ಸಮುದಾಯದ ಅಭಿವೃದ್ಧಿಯಾಗಿ ನೋಡಲಾಗುತ್ತಿದೆ. ಸಂವಿಧಾನ ಜಾರಿಗೊಂಡ 75 ವರ್ಷಗಳಲ್ಲಿ ಅಂಬೇಡ್ಕರ್ ಚಿಂತನೆ ಸಾಕಾರವಾಗಿಲ್ಲ. ಮೀಸಲಾತಿಯಿಂದ ಉದ್ಯೋಗ, ರಾಜಕೀಯ ಅಧಿಕಾರ ಕೆಲವರಿಗೆ ದೊರೆತಿದೆಯಷ್ಟೇ ಎಂದರು.ಅಂಬೇಡ್ಕರ್ ಪ್ರತಿಪಾದಿಸಿದಂತೆ ಶಿಕ್ಷಿತರಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು. ಒಂದು ಪರಿವಾರವಾಗಿ ಹೋರಾಟ ರೂಪಿಸಬೇಕು. ಮಹಿಳೆಯರಿಗೆ ನಾಯಕತ್ವ ಕೊಡಬೇಕು. ಆದರೆ ವೈವಿಧ್ಯತೆ ಅಳಿಸಿ ಹಿಂದುತ್ವ ಜಾರಿಗೆ ತರಲಾಗುತ್ತಿದೆ. ಜನಪದ ಕಲೆಗಳು, ದೇವರುಗಳನ್ನು ಮರೆಮಾಡಲಾಗುತ್ತಿದೆ ಎಂದು ಅವರು ಹೇಳಿದರು.ನೂರಾರು ವರ್ಷಗಳಿಂದ ಬೇರು ಬಿಟ್ಟಿರುವ ಅಸಮಾನ ವ್ಯವಸ್ಥೆಯನ್ನು ಹತ್ತಾರು ವರ್ಷಗಳಲ್ಲಿ ಸರಿ ಮಾಡಲಾಗದು. ದಲಿತರಿಗೆ ಕ್ರಿಕೆಟ್, ಸಿನಿಮಾ, ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಇಲ್ಲ. ಸರ್ಕಾರಿ ನೇಮಕಾತಿ ತಡೆಯಲಾಗುತ್ತಿದೆ. ಶಿಕ್ಷಣ ಖಾಸಗೀಕರಣಗೊಂಡಿದೆ. ಉದ್ಯೊಗ ಮತ್ತು ಶಿಕ್ಷಣದ ನಂಟು ಕಡಿದಿದೆ. ಇದು ಭವಿಷ್ಯದಲ್ಲಿ ಭಾರೀ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಅವರು ಭವಿಷ್ಯ ನುಡಿದರು.ಕರ್ನಾಟಕದಲ್ಲಿ ದೇವರಾಜ ಅರಸು-ಹಾವನೂರು ಜೋಡಿಯ ಕ್ರಾಂತಿಕಾರಕ ತೀರ್ಮಾನ, ಎಸ್‌ಇಪಿ - ಟಿಎಸ್.ಪಿ ಯೋಜನೆಗಳು, ಒಳ ಮೀಸಲಾತಿ ಕುರಿತ ತೀರ್ಮಾನಗಳಿಂದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರಗತಿ ಉತ್ತಮವಾಗಿದೆ. ವಸತಿ ಶಾಲೆಗಳ ನಿರ್ಮಾಣದಲ್ಲಿ ಕರ್ನಾಟಕ ದಾಖಲೆ ಬರೆದಿದೆ ಎಂದರು.ದಿಕ್ಸೂಚಿ ಭಾಷಣ ಮಾಡಿದ ಕವಿ ಕೋಟಿಗಾನಹಳ್ಳಿ ರಾಮಯ್ಯ, 1974ರಲ್ಲಿ ಹುಟ್ಟಿದ ಪ್ರಜ್ಞೆ ಒಳ ಮೀಸಲಾತಿಯವರಿಗೆ ನಡೆಸಲ್ಪಟ್ಟಿತು. ಒಳ ಮೀಸಲಾತಿ ನಿರ್ಧಾರದ ಬಳಿಕ ಸಮಾನತೆ ಬಗ್ಗೆ ಮಾತಾಡುವ ನಾಲಿಗೆ ಕಳೆದುಕೊಂಡೆವು ಎಂದು ಬೇಸರಿಸಿದರು.ಅಂಬೇಡ್ಕರ್ ಅವರನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡದಲ್ಲಿಯೇ 25 ಕೃತಿಗಳು ಬಿಡುಗಡೆ ಆಗಿವೆ. ಇಂಗ್ಲಿಷ್, ಹಿಂದಿಯಲ್ಲೂ ಬಹಳ ಕೃತಿಗಳಿವೆ. ನಿಜವಾದ ಅಂಬೇಡ್ಕರ್ ಅವರನ್ನು ತಿಳಿಸುವ ಸವಾಲು ಎದುರಿಗಿದೆ. ಈ ನೆಲದಲ್ಲಿ ಸಾಂಸ್ಕೃತಿಕ ಕ್ರಾಂತಿ ಆಗಬೇಕು. ಅದು ಬುದ್ಧ ಭಾರತಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ನುಡಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಕೋಟಗಾನಹಳ್ಳಿ ರಾಮಯ್ಯ, ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರ ಕುಮಾರ್, ಹಿರಿಯ ಪ್ರಾಧ್ಯಾಪಕ ಪ್ರೊ.ಜೆ. ಸೋಮಶೇಖರ್ ಇದ್ದರು.