ಕನ್ನಡಪ್ರಭ ವಾರ್ತೆ ಮೈಸೂರುಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಪ್ರತಿ ವಿಶ್ವವಿದ್ಯಾಲಯದಲ್ಲೂ ಗಾಂಧಿ ಭವನ ನಿರ್ಮಾಣವೂ ಆಗಲಿದೆ. 2025ರ ಅ. 2ರೊಳಗೆ ಕಾರ್ಯಗತವಾಗುತ್ತದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಹೇಳಿದರು.ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಗಾಂಧಿ ಅಧ್ಯಯನ ಕೇಂದ್ರದಿಂದ ಶೇಷಾದ್ರಿಪುರಂ ಪದವಿ ಕಾಲೇಜು ಸಹಯೋಗದಲ್ಲಿ ಗುರುವಾರ ನಡೆದ 77ನೇ ಸರ್ವೋದಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಸಂದಿದೆ. ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ 30 ಜನರ ಸಮಿತಿಯನ್ನು ಸರ್ಕಾರ ರಚಿಸಿದೆ. ಸಮಿತಿ ಶಿಫಾರಸಿನಂತೆ ಈ ಅನುದಾನದಲ್ಲಿ ನಡೆಯಬೇಕಾದ ಕಾರ್ಯಕ್ರಮಗಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರತಿ ವಿವಿಯಲ್ಲೂ ಗಾಂಧಿ ಭವನ ನಿರ್ಮಾಣವೂ ಆಗಲಿದೆ. 2025ರ ಅ. 2ರೊಳಗೆ ಕಾರ್ಯಗತವಾಗುತ್ತದೆ ಎಂದು ಅವರು ತಿಳಿಸಿದರು.ಮಹಾತ್ಮ ಗಾಂಧಿ ವಿಚಾರಧಾರೆಯನ್ನು ರಾಜ್ಯದಾದ್ಯಂತ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ₹ 100 ಕೋಟಿ ರೂ. ಅನುದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಭಾರತದಲ್ಲಿ 60 ಕೋಟಿ ಯುವಜನರಿದ್ದು, ಇತಿಹಾಸ ತಿಳಿದುಕೊಂಡವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ ಎಂಬ ಬಿ.ಆರ್. ಅಂಬೇಡ್ಕರ್ ಮಾತಿನಂತೆ ದೇಶದ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಅರಿಯಬೇಕು ಎಂದರು.ಇಂದಿನ ಬದುಕಿಗೆ ಗಾಂಧೀಜಿ ಪ್ರಸ್ತುತತೆ ವಿಷಯ ಕುರಿತು ಪ್ರೊ.ಎಚ್.ಜೆ. ಸರಸ್ವತಿ ಮಾತನಾಡಿ, ರಾಮ ಪಿತೃವಾಕ್ಯ ಪರಿಪಾಲಕನಾದರೆ, ಗಾಂಧಿ ಮಾತೃವಾಕ್ಯ ಪರಿಪಾಲಕರಾಗಿದ್ದರು. ತಮ್ಮ ಶರೀರವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಮನಸ್ಸಿನ ಅಪಾರ ಶಕ್ತಿಯನ್ನು ಬಳಸಿಕೊಂಡು ಶರೀರ ಹಾಗೂ ಮನಸ್ಸಿನ ಹೊಂದಾಣಿಕೆಯಿಂದ ಅದ್ಭುತವಾದುದ್ದನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.ನಗರ ಪಾಲಿಕೆ ಪೌರಕಾರ್ಮಿಕೆ ಯಶೋದಾ ಅವರನ್ನು ಅಭಿನಂದಿಸಲಾಯಿತು. ವಿವಿ ಕುಲಸಚಿವೆ ಎಂ.ಕೆ. ಸವಿತಾ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕೆ. ಸೌಮ್ಯಾ ಈರಪ್ಪ, ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಪ್ರೊ. ಕೃಪಲಾನಿ ಇದ್ದರು.