(ಲೀಡ್, 2 ಫೋಟೋ ಬಳಸಿ) ನಾಲ್ಕು ತಿಂಗಳ ಬಳಿಕ ಪ್ರವಾಸಿಗರಿಗೆ ಮಾಂದಲಪಟ್ಟಿ ಮುಕ್ತ

KannadaprabhaNewsNetwork |  
Published : Jun 12, 2026, 02:30 AM IST
ಚಿತ್ರ :  11ಎಂಡಿಕೆ1 : ಮಾಂದಲಪಟ್ಟಿಯಲ್ಲಿ ನಿರ್ಮಾಣವಾಗಿರುವ ರಸ್ತೆ. | Kannada Prabha

ಸಾರಾಂಶ

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ, ಮಾಂದಲಪಟ್ಟಿ(ಮುಗಿಲುಪೇಟೆ) ಇದೀಗ ನಾಲ್ಕು ತಿಂಗಳ ಬಳಿಕ ಪ್ರವಾಸಿಗರಿಗೆ ಮುಕ್ತಗೊಂಡಿದೆ. ಸಂಪೂರ್ಣ ಹದಗೆಟ್ಟಿದ್ದ ರಸ್ತೆಯನ್ನು ಅರಣ್ಯ ಇಲಾಖೆಯಿಂದ ಸ್ಟೋನ್ ಪಿಚ್ಚಿಂಗ್ ಮೂಲಕ ರಸ್ತೆ ಸುಗಮಗೊಳಿಸಲಾಗಿದ್ದು, ಇದೀಗ ಪ್ರವಾಸಿಗರು ಸುಲಭವಾಗಿ ಮಾಂದಲಪಟ್ಟಿಗೆ ತೆರಳಬಹುದಾಗಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ, ಮಾಂದಲಪಟ್ಟಿ(ಮುಗಿಲುಪೇಟೆ) ಇದೀಗ ನಾಲ್ಕು ತಿಂಗಳ ಬಳಿಕ ಪ್ರವಾಸಿಗರಿಗೆ ಮುಕ್ತಗೊಂಡಿದೆ. ಸಂಪೂರ್ಣ ಹದಗೆಟ್ಟಿದ್ದ ರಸ್ತೆಯನ್ನು ಅರಣ್ಯ ಇಲಾಖೆಯಿಂದ ಸ್ಟೋನ್ ಪಿಚ್ಚಿಂಗ್ ಮೂಲಕ ರಸ್ತೆ ಸುಗಮಗೊಳಿಸಲಾಗಿದ್ದು, ಇದೀಗ ಪ್ರವಾಸಿಗರು ಸುಲಭವಾಗಿ ಮಾಂದಲಪಟ್ಟಿಗೆ ತೆರಳಬಹುದಾಗಿದೆ. ಗುಂಡಿ ಬಿದ್ದು, ತೀರಾ ಹದಗೆಟ್ಟು ಸಂಚಾರಕ್ಕೆ ತೊಡಕುಂಟಾಗಿದ್ದ ಹಾಗೂ ಅಪಾಯಕಾರಿಯಾಗಿದ್ದ ರಸ್ತೆಯಲ್ಲಿ ಜೀಪುಗಳು ಮಾತ್ರ ಸಂಚರಿಸುವ ಪರಿಸ್ಥಿತಿ ಉಂಟಾಗಿತ್ತು. ರಸ್ತೆ ಕಾಮಗಾರಿ ನಡೆಸುವ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅರಣ್ಯ ಇಲಾಖೆಯಿಂದ ಮಾಂದಲಪಟ್ಟಿಗೆ ವಾಹನ ಸಂಚಾರ ಸ್ಥಗಿತಮಾಡಲಾಗಿತ್ತು. ಅಲ್ಲದೆ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಕಾರುಗಳನ್ನು ಹೊರತುಪಡಿಸಿ ಜೀಪು, ಬೈಕ್ ಗಳು ಕೂಡ ಮಾಂದಲಪಟ್ಟಿಗೆ ಸುಲಭವಾಗಿ ತೆರಳಬಹುದಾಗಿದೆ.

ಮಾಂದಲಪಟ್ಟಿ ಪ್ರವೇಶ ದ್ವಾರದಿಂದ ವೀಕ್ಷಣಾ ಸ್ಥಳದ ವರೆಗೂ ಅರಣ್ಯ ಇಲಾಖೆಯಿಂದ ರು.50 ಲಕ್ಷ ವೆಚ್ಚದಲ್ಲಿ ಸ್ಟೋನ್ ಪಿಚ್ಚಿಂಗ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಇದೀಗ ಪ್ರವಾಸಿಗರಿಗೆ ಜೂ.12ರಿಂದ ಮುಕ್ತಗೊಳ್ಳಲಿದೆ. ವಾಹನಗಳ ವೇಗವನ್ನು ನಿಯಂತ್ರಿಸುವ ಸಲುವಾಗಿ ಅಲ್ಲಲ್ಲಿ ಹಂಪ್ಸ್ ಗಳನ್ನು ಕೂಡ ಹಾಕಲಾಗಿದೆ. ಸ್ಟೋನ್ ಪಿಚ್ಚಿಂಗ್ ಮಾಡಿರುವುದರಿಂದ ಮಾಂದಲಪಟ್ಟಿ ತಾಣ ಮತ್ತಷ್ಟು ಆಕರ್ಷಣೀಯವಾಗಿದೆ. ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಮಾಂದಲಪಟ್ಟಿ ಬೆಟ್ಟಗಳಿಂದ ಕೂಡಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಎಲ್ಲಿ ನೋಡಿದರೂ ಕೂಡ ಹಸಿರ ಸೊಬಗು ಮುದ ನೀಡಿದಂತಿದೆ. ಆಗಾಗ್ಗೆ ಮಂಜು ಕವಿದ ವಾತಾವರಣ ಇರುವುದರಿಂದಲೇ ಇದು ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.

ಮಡಿಕೇರಿಯಿಂದ 21 ಕಿ.ಮೀ ದೂರದಲ್ಲಿರುವ ಮಾಂದಲಪಟ್ಟಿಗೆ ಬಾಡಿಗೆ ಜೀಪುಗಳನ್ನು ಆಶ್ರಯಿಸಬೇಕಾಗಿತ್ತು. ಪ್ರವೇಶ ದ್ವಾರದಿಂದ ಬಾಡಿಗೆ ಜೀಪುವಿನಲ್ಲಿ ವೀಕ್ಷಣಾ ಸ್ಥಳದ ವರೆಗೆ ತೆರಳಬೇಕಾಗಿತ್ತು. ಪ್ರವೇಶ ದ್ವಾರದಿಂದ 1 ಕಿ.ಮೀ ವರೆಗೆ ರಸ್ತೆ ನಿರ್ಮಾಣವಾಗಿದ್ದು, ಉಳಿದ 4 ಕಿ.ಮೀ ಕೂಡ ರಸ್ತೆಯನ್ನು ಸುಗಮಗೊಳಿಸಲಾಗಿದೆ. ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಈ ಹಿಂದಿನಿಂದಲೂ ನಿಗದಿ ಮಾಡಲಾಗಿದೆ. ವಾಹನ ಪ್ರವೇಶಕ್ಕೂ ದರ ನಿಗದಿ ಮಾಡಲಾಗಿದೆ.

ಬೈಕ್ ನಲ್ಲಿ ತೆರಳಬಹುದು!: ಪ್ರವಾಸಿಗರು ತಮ್ಮ ಬೈಕ್ ನಲ್ಲಿ ಮಾಂದಲಪಟ್ಟಿಗೆ ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಮಾಂದಲಪಟ್ಟಿಯ ಪ್ರವೇಶ ದ್ವಾರದಿಂದ, ವೀಕ್ಷಣಾ ಸ್ಥಳದ ವರೆಗೂ ಪ್ರಮುಖ ಕಡೆಗಳಲ್ಲಿ ಬಹುತೇಕ ಕಡೆ ರಸ್ತೆಯನ್ನು ಸುಗಮಗೊಳಿಸಲಾಗಿದೆ. ಇದರಿಂದ ಬೈಕ್ ಸಂಚಾರಕ್ಕೆ ಸಮಸ್ಯೆ ಇಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಜೀಪುಗಳಿಗೆ ಅವಕಾಶ!: ಮಾಂದಲಪಟ್ಟಿಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜೀಪುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರವಾಸಿಗರ ಖಾಸಗಿ ಕಾರ್ ಗಳ ಸಂಚಾರಕ್ಕೆ ಅವಕಾಶವಿಲ್ಲ. ಕೆಲವು ಕಡೆಗಳಲ್ಲಿ ರಸ್ತೆ ಅಪಾಯಕಾರಿಯಾಗಿದೆ. ಆದ್ದರಿಂದ ಜೀಪು ಹಾಗೂ ಬೈಕ್ ಗಳಿಗೆ ಅವಕಾಶ ನೀಡಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ.

*ರು.50 ಲಕ್ಷ ವೆಚ್ಚದಲ್ಲಿ ಮಾಂದಲಪಟ್ಟಿಯಲ್ಲಿ ಸ್ಟೋನ್ ಪಿಚ್ಚಿಂಗ್ ರಸ್ತೆ ಕಾಮಗಾರಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ರಸ್ತೆ ಮಾಡಲಾಗಿದ್ದು, ಜೀಪುಗಳು ಹಾಗೂ ಬೈಕ್ ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜೂ.12ರಿಂದ ಪ್ರವಾಸಿಗರಿಗೆ ಮಾಂದಲಪಟ್ಟಿ ಮುಕ್ತವಾಗಲಿದೆ. -ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ - ಮಕ್ಕಳ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಾಗಾರ
ಎಂಐಟಿಕೆ ವಿದ್ಯಾರ್ಥಿನಿಯರಿಂದ ಸ್ಮಾರ್ಟ್ ಹೈಡ್ರೋಪೋನಿಕ್ಸ್