ಹೊಸಪೇಟೆ: ನಗರದ ಶಿವಜ್ಯೋತಿ ಬಡಾವಣೆ, ಕಿರಣ್‌ಕೃಷ್ಣ ಬಡಾವಣೆಯ ನಿವೇಶನಗಳ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಫಾರಂ-3, ಕಟ್ಟಡ ನಿರ್ಮಾಣ ಪರವಾನಗಿ ಕೊಡಿಸಬೇಕು ಎಂದು ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಶಾಸಕ ಎಚ್.ಆರ್. ಗವಿಯಪ್ಪಗೆ ಮನವಿ ಸಲ್ಲಿಸಿದರು.ನಗರದ ಶಿವಜ್ಯೋತಿ ಬಡಾವಣೆ ಮತ್ತು ಕಿರಣ್‌ಕೃಷ್ಣ ಬಡಾವಣೆಗಳಲ್ಲಿ 2000 ನಿವೇಶನ ಇವೆ. ಈ ಜಮೀನಿಗೆ ಈ ಹಿಂದೆ ಬಳ್ಳಾರಿ ಡಿಸಿ 2004ರಿಂದ 2007ರಲ್ಲಿ ಎನ್.ಎ. ಆದೇಶ ಮಾಡಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಲೇಔಟ್‌ಗಳ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಿತ್ತು. ಲೇಔಟ್ ಮಾಲೀಕರು ಲೇಔಟ್ ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಪಡಿಸದಿದ್ದರೂ ನಗರಾಭಿವೃದ್ಧಿ ಪ್ರಾಧಿಕಾರ ಹೊಸಪೇಟೆ ಮಾರಾಟಕ್ಕೆ ಬಿಡುಗಡೆ ಪ್ರಮಾಣಪತ್ರ ನೀಡಿದ್ದರು. ನಗರಸಭೆ ನೀಡಿದ ಫಾರಂ-3 ಆಧಾರದಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನಗಳು ನೋಂದಣಿ ಆಗಿವೆ. 2020ರವರೆಗೆ ನಗರಸಭೆಯಲ್ಲಿ ಫಾರಂ-3 ನೀಡಿದ್ದಾರೆ. ಉಪನೋಂದಣಿ ಕಚೇರಿಯಲ್ಲೂ ನೋಂದಣಿಯಾಗಿದೆ. ನಗರಸಭೆಯಲ್ಲಿ ಈಗಲೂ ಆಸ್ತಿ ತೆರಿಗೆ ಕಟ್ಟುತ್ತಿದ್ದೇವೆ. 2013ರಿಂದ 2015ರ ಮಧ್ಯ ಅವಧಿಯಲ್ಲಿ ಸುಮಾರು 100-150 ಜನರಿಂದ ಹಂಪಿ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಮನೆ ಕಟ್ಟಲು ಪರವಾನಗಿ ನೀಡಿದ್ದರು. 2020ರಲ್ಲಿ ನಗರಸಭೆ ಯಾವುದೇ ಸರ್ಕಾರಿ ಆದೇಶ ಇಲ್ಲದಿದ್ದರೂ ಫಾರಂ-3 ನೀಡುವುದು ನಿಲ್ಲಿಸಿದ್ದಾರೆ ಎಂದು ದೂರಿದರು.
ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯು.ಆಂಜನೇಯಲು, ಮುಖಂಡರಾದ ಎಚ್.ತಿಪ್ಪೇಸ್ವಾಮಿ, ನಾರಾಯಣರಾವ್, ಕನಕೇರಿ, ಎಸ್.ಎಂ. ಬಾಷಾ ಇದ್ದರು.