ರಾಮೋತ್ಸವ ಸರಣಿಯಲ್ಲಿನ ಮೂರನೇ ದಿನದ ಅಹಲ್ಯಾರಾಮ ಸ್ಮರಣೆಯಲ್ಲಿ ‘ಮಂಡೋದರಿಯ ಅಂತರಂಗದಲ್ಲಿ ರಾಮ’ ಎಂಬ ವಿಷಯದ ಬಗ್ಗೆ ವೇದಮೂರ್ತಿ ಕೇಶವ ಭಟ್ಟ ಕೇಕಣಾಜೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಮಂಡೋದರಿಯೂ ಅಂತರ್ಮುಖಿಯಾಗಿ, ಭಾವ-ಸದ್ಭಾವದಿಂದ ರಾಮನಿಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಅವನನ್ನು ಅರಿತವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಯಕ್ಷಗಾನ ಅರ್ಥಧಾರಿ, ವೇದಮೂರ್ತಿ ಕೇಶವ ಭಟ್ಟ ಕೇಕಣಾಜೆ ಹೇಳಿದರು.ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ತುಳು ಸಂಘ, ಕನ್ನಡ ಸಂಘ, ಹಿಂದಿ ಸಂಘ, ಸಂಸ್ಕೃತ ಸಂಘ ಮತ್ತು ಎನ್.ಸಿ.ಸಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ರಾಮೋತ್ಸವ ಸರಣಿಯಲ್ಲಿನ ಮೂರನೇ ದಿನದ ಅಹಲ್ಯಾರಾಮ ಸ್ಮರಣೆಯಲ್ಲಿ ‘ಮಂಡೋದರಿಯ ಅಂತರಂಗದಲ್ಲಿ ರಾಮ’ ಎಂಬ ವಿಷಯದ ಬಗ್ಗೆ ಮಾತನಾಡಿದರು.ಶ್ರೀಮದ್ ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯಾದರೆ, ಅಯೋಧ್ಯೆ ನಮ್ಮ ದೇಶದ ಸಂಸ್ಕಾರ ಕೇಂದ್ರ. ಟಿವಿಯಲ್ಲಿ, ಸಿನಿಮಾಗಳಲ್ಲಿ ರಾಮಾಯಣವನ್ನು ಹಲವಾರು ರೀತಿಗಳಲ್ಲಿ ತೋರಿಸಿದ್ದರೂ ಕೂಡ ಭಾರತ ನಂಬಿದ್ದು, ವಾಲ್ಮೀಕಿ ಬರೆದ ರಾಮಾಯಣವನ್ನು ಮಾತ್ರ. ರಾಮಾಯಣದಲ್ಲಿ ಸೀತೆಯ ಸ್ಥಾನದಂತೆಯೇ ಮಂಡೋದರಿಯದ್ದು ಕೂಡ ಎಂದು ಉಲ್ಲೇಖವಿದೆ. ರಾಕ್ಷಸ ಪರಿವಾರದ ಹಿನ್ನೆಲೆ ಜೊತೆಗೆ ರಾವಣನ ಮಡದಿಯಾಗಿದ್ದರೂ ಮಂಡೋದರಿಗೆ ರಾಮನ ದರ್ಶನವಾಯಿತು. ಹೇಗೆಂದರೆ ಅವಳು ಸಧ್ವಿ ಶಿರೋಮಣಿ, ಮಹಾ ಪತಿವ್ರತೆ. ಅದಕ್ಕೂ ಮಿಗಿಲಾಗಿ ಮಂಡೋದರಿ ರಾಮನ್ನು ಒಳಗಣ್ಣಿನಿಂದ ಅರಿತವಳೂ, ಅನುಸರಿಸಿದವಳೂ ಅಗಿರುವುದರಿಂದ. ಹಾಗಾಗಿಯೇ ಅವಳಲ್ಲಿ ಒಳ್ಳೆಯತನಗಳೇ ತುಂಬಿಕೊಂಡಿದ್ದವು ಎಂದು ಹೇಳಿದರು.ಕಾರ್ಯಕ್ರಮವನ್ನು ಕಾಲೇಜು ಪರಿಚರಾಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪಾವತಿ ಉದ್ಘಾಟಿಸಿದರು.ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್‌ನ ಸಾಧ್ವಿ ಶ್ರೀ ಮಾತಾನಂದಮಯೀ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಜಗನ್ನಾಥ ಎ. ಉಪಸ್ಥಿತರಿದ್ದರು.ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳೀಕೃಷ್ಣ ಕೆ.ಎನ್., ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಚ್.ಜಿ. ಶ್ರೀಧರ್, ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಶ್ರಾವ್ಯ ಸ್ವಾಗತಿಸಿದರು. ವಿದ್ಯಾಸರಸ್ವತಿ ವಂದಿಸಿದರು. ಪೂಜಾಲಕ್ಷ್ಮಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.