ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀಕಾಳಿಕಾಂಬ ದೇವಾಲಯದ ಗಜೇಂದ್ರಮೋಕ್ಷ ಕೊಳದ ಬಳಿ ಇರುವ ಬನ್ನಿಮರಕ್ಕೆ ಮಧ್ಯಾಹ್ನ ೨.೩೦ ಗಂಟೆಗೆ ಸಲ್ಲುವ ಧನಿಷ್ಠ ನಕ್ಷತ್ರ ಮಕರ ಲಗ್ನದಲ್ಲಿ ಮಂಡ್ಯ ಯೂತ್ ಗ್ರೂಪ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಆವರಿಸಿರುವ ಬರಗಾಲದ ಕರಾಳ ಛಾಯೆ ಮರೆಯಾಗಲಿ. ಎಲ್ಲೆಡೆ ಉತ್ತಮ ಮಳೆಯಾಗಿ ನಾಡಿನಾದ್ಯಂತ ಸುಭಿಕ್ಷೆ ನೆಲೆಸಲಿ. ರೈತರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ನಂತರ ಬೆಳ್ಳಿರಥದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಶ್ರೀಚಾಮುಂಡೇಶ್ವರಿ ದೇವಿಗೆ ಡಾ.ಅನಿಲ್ ಆನಂದ್ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.ಶ್ರೀಕಾಳಿಕಾಂಬ ದೇವಾಲಯದ ಮುಂಭಾಗದಿಂದ ಮಂಡ್ಯ ದಸರಾ ಮೆರವಣಿಗೆಗೆ ಆರಂಭಗೊಂಡಿತು. ಸುಮಾರು ೨೦ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಜೊತೆಗೂಡಿದವು. ಒಂದೊಂದು ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಪ್ರದರ್ಶನ ನೀಡುತ್ತಾ ಮುಂದೆ ಮುಂದೆ ಸಾಗಿದವು. ಕಲಾವಿದರ ಪ್ರತಿಭಾ ಪ್ರದರ್ಶನ ಸಾರ್ವಜನಿಕರನ್ನು ಬಹುವಾಗಿ ಆಕರ್ಷಿಸಿತು. ಮಂಡ್ಯ ದಸರಾ ನಾಡಿನ ಬಹುಸಂಸ್ಕೃತಿಯ ಸಂಗಮದಂತೆ ಕಂಡುಬಂದಿತು.
ಮಂಡ್ಯ ದಸರಾದಲ್ಲಿ ನಾಗರಹೊಳೆ ಕಲಾತಂಡದ ಅಡವಿ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಪಟ ಕುಣಿತ, ಐದು ತಲೆ ಸರ್ಪದೊಳಗೆ ಶಿವನ ವಿಗ್ರಹ, ಶ್ರೀಆಂಜನೇಯಸ್ವಾಮಿ ವಿಗ್ರಹ, ಪಾಂಡಾ, ಗೊರಿಲ್ಲಾ ಕಲಾತಂಡಗಳನ್ನು ವಿಶೇಷವಾಗಿ ಕರೆತರಲಾಗಿತ್ತು. ಹೊಸದಾಗಿ ಸೇರ್ಪಡೆಗೊಂಡಿದ್ದ ಕಲಾತಂಡಗಳು ನೀಡಿದ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾದವು.
ಪುಟ್ಟ ಕಾಲು ಉದ್ದ ದೇಹದೊಂದಿಗೆ ಮೈಮೇಲೆ ಕಪ್ಪು ಚುಕ್ಕೆಗನ್ನಿರಿಸಿಕೊಂಡು ಶ್ವೇತ ವರ್ಣದಲ್ಲಿ ಪಾಲ್ಗೊಂಡಿದ್ದ ಬನ್ನೂರು ಕುರಿಗಳು ಎಲ್ಲರ ಗಮನಸೆಳೆದವು. ಬೀಸು ಕಂಸಾಳೆ, ಸಂತೆಕಸಲಗೆರೆ ತಂಡದಿಂದ ಜಡೆಕೋಲು ಕುಣಿತ, ಕೀಲು ಕುದುರೆ, ಯುವತಿಯರು ಪ್ರಸ್ತುತಪಡಿಸಿದ ನಂದಿಧ್ವಜ ಕುಣಿತ, ತುಮಕೂರಿನ ಚಿಲಿಪಿಲಿ ಗೊಂಬೆ ಕಲಾತಂಡಗಳು ಜನರಿಂದ ಶಹಬ್ಬಾಸ್ಗಿರಿ ಪಡೆದುಕೊಂಡವು. ಇನ್ನುಳಿದಂತೆ ನಾದಸ್ವರ, ಪೂಜಾ ಕುಣಿತ, ಹಳ್ಳಿಕಾರ್ ಜೋಡೆತ್ತು, ಬೆಳ್ಳಿರಥದಲ್ಲಿ ಕುಳಿತ ಮಹಾರಾಜ ಕಲಾತಂಡಗಳು ಗಮನಸೆಳೆದವು. ಪೇಟ, ಸೂಟು-ಬೂಟನ್ನು ಧರಿಸಿದ್ದ ಶ್ರೀನಿವಸ ಮೂರ್ತಿ ಅವರು ಸರ್ ಎಂ.ವಿಶ್ವೇಶ್ವರಯ್ಯ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಮಂಡ್ಯ ದಸರಾ ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಂತು ವೀಕ್ಷಿಸಿದರು. ವಿ.ವಿ.ರಸ್ತೆಯಿಂದ ಹೊಸಹಳ್ಳಿ ವೃತ್ತದವರೆಗೆ ಹಾಗೂ ಹೊಸಹಳ್ಳಿ ವೃತ್ತದಿಂದ ಬನ್ನೂರು ರಸ್ತೆವರೆಗೂ ಕಟ್ಟಡಗಳ ಮೇಲೆ ನಿಂತು ದಸರಾ ಮೆರವಣಿಗೆಯನ್ನು ನೋಡಿ ಆನಂದಿಸಿದರು. ಹಲವಾರು ಮಂದಿ ಜಾನಪದ ಕಲಾತಂಡಗಳ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು, ಹಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಪೊಲೀಸ್ ಇಲಾಖೆ ಸಹಕಾರ