ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆಯ ಯತಿರಾಜದಾಸರ್ ಗುರುಪೀಠ ಮತ್ತು ಗುರೂಜಿ ಫೌಂಡೇಷನ್ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಾ ಸಾಹಿತ್ಯ-ಸಂಸ್ಕೃತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ವಾಂಸರನ್ನು ಅಭಿನಂದಿಸಿ ಮಾತನಾಡಿದರು.
ರಾಮಾನುಜರು ಮೇಲುಕೋಟೆಗೆ ಬಂದ ವೇಳೆ ಪ್ರಮುಖವಾಗಿ ನಾಲ್ಕು ಶಿಷ್ಯರನ್ನು ಕರೆತಂದು ಸ್ಥಾನಾಚಾರ್ಯರನ್ನಾಗಿ ನೇಮಿಸಿ ಅವರಿಗೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಹಲವು ಜವಾಬ್ದಾರಿ ಮತ್ತು ಕೈಂಕರ್ಯ ನೀಡಿದ್ದಾರೆ. ಆಚಾರ್ಯರು ಯದುಗಿರಿಯಲ್ಲಿ ನೆಲೆಸಿದ್ದ ೧೨ ವರ್ಷವೂ ನಾಲ್ಕೂ ಶಿಷ್ಯರ ಮನೆಯಲ್ಲೇ ಭಿಕ್ಷೆ ಸ್ವೀಕರಿಸುತ್ತಿದ್ದರು. ಈ ಶಿಷ್ಯರ ಪೈಕಿ ರಾಮಾನುಜರಿಗೆ ಪ್ರಿಯ ಶಿಷ್ಯರಾದ ಯತಿರಾಜದಾಸರ್ ಗುರುಪೀಠ ದೇವಾಲಯದ ಕೈಂಕರ್ಯದ ಜೊತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಸೇವೆ ಮಾಡುತ್ತಿದೆ. ಅನ್ನದಾನ, ಗುರುಕುಲ, ಜಾನಪದಕಲೆಗಳ ಉತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪುಸ್ತಕಗಳ ಪ್ರಕಾಶನ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.ವಿಶೇಷ ಆಹ್ವಾನಿತರಾಗಿದ್ದ ರೈತ ಮತ್ತು ಕಾರ್ಮಿಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಮಾತನಾಡಿ, ಯತಿರಾಜದಾಸರ್ ಗುರುಪೀಠ ಸಾಮಾಜಿಕ ಕಾರ್ಯ ಮತ್ತು ಶೈಕ್ಷಣಿಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಮೇಲುಕೋಟೆ ಹಾಗೂ ಉತ್ಸವಗಳಿಗೂ ವ್ಯಾಪಕ ಪ್ರಚಾರ ನೀಡುತ್ತಾ ಬಂದಿದೆ. ಹೀಗಾಗಿ ಯತಿರಾಜದಾಸರ್ ಗುರುಪೀಠದ ಎಲ್ಲಾ ಕಾರ್ಯಕ್ರಮಗಳೂ ಮಾದರಿಯಾಗಿದೆ ಎಂದರು.
ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಸಮಾರಂಭದ ಸಾನ್ನಿಧ್ಯವಹಿಸಿ, ಗುರುಪೀಠದ ಮುಂದಿನ ಸೇವಾಯೋಜನೆಗಳ ಮಾಹಿತಿ ನೀಡಿದರು. ಗ್ರಾ.ಪಂ ಅಧ್ಯಕ್ಷೆ ಭವಾನಿಹರಿಧರ್ ಅಧ್ಯಕ್ಷತೆ ವಹಿಸಿದ್ದರು. ದೇವಾಲಯದ ಆಡಳಿತ ಸಮಿತಿ ಸದಸ್ಯ ವಿ.ವೆಂಕಟರಾಮೇಗೌಡ, ವಿದ್ವಾನ್ ಸ್ಥಾನೀಕಂ ಸಂಪತ್ಕುಮಾರನ್ ಇದ್ದರು.