ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೧- ೨೦೨೬ರವರೆಗೆ ಮಂಡ್ಯ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ರವಿಕುಮಾರ್ ಚಾಮಲಾಪುರ ಅವರು ಅಕಾಲಿಕ ಮರಣಕ್ಕೆ ತುತ್ತಾದ ನಂತರ ಮಂಡ್ಯ ನಗರದಲ್ಲಿ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದ ಮಹೇಶ್ ಜೋಷಿ ಅವರು ಯಶಸ್ವಿಯಾಗಿ ಸಮ್ಮೇಳನ ನಡೆಸುವ ಉದ್ದೇಶದಿಂದ ಜಿಲ್ಲಾ ಕಸಾಪ ಮೂರನೇ ಕಾರ್ಯದರ್ಶಿಯಾಗಿ ವಿ.ಹರ್ಷ ಅವರನ್ನು ಸಮ್ಮೇಳನದವರೆಗೆ ಮಾತ್ರ ನೇಮಕ ಮಾಡಿ ಆದೇಶ ನೀಡಿದ್ದರು. ನಂತರ ಕಾರಣಾಂತರಗಳಿಂದ ಈತನ ಸದಸ್ಯತ್ವವನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದರು.
ಇದೀಗ ಕಸಾಪ ಸದಸ್ಯತ್ವ ರದ್ದುಗೊಂಡಿರುವ ವಿ.ಹರ್ಷ ಅವರು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ತಾನೇ ಜಿಲ್ಲಾ ಅಧ್ಯಕ್ಷನೆಂದು ಕ್ಯಾಲೆಂಡರ್ ಬಿಡುಗಡೆಗೊಳಿದ್ದಾರೆ. ಜಿಲ್ಲಾಡಳಿತ, ಸಾಹಿತ್ಯಾಸಕ್ತರನ್ನು ದಿಕ್ಕುತಪ್ಪಿಸಿ, ಜಿಲ್ಲೆಯ ಅಧ್ಯಕ್ಷನೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಜಿಲ್ಲಾಡಳಿತ ಸಾಹಿತ್ಯ ಭವನ ನಿರ್ಮಿಸುತ್ತಿದ್ದು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಹಾಲಿ ಇರುವ ಪದಾಧಿಕಾರಿಗಳ ಮಾಹಿತಿಯನ್ನು ನೀಡುವಂತೆ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾವಣೆ ಮೂಲಕ ಆಯ್ಕೆಯಾಗದ ಹಾಗೂ ಮಾಜಿ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಪರಿಷತ್ತಿಗೆ ನೀಡಿರುವ ಪತ್ರದಲ್ಲಿ ನೇಮಕಗೊಂಡಿರುವ ಪದಾಧಿಕಾರಿಗಳು ಆಯ್ಕೆ ಮಾಡದೆ ತಮ್ಮ ಕೇಂದ್ರ ಕಚೇರಿಯ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಿ ನೇಮಕಗೊಳ್ಳದೆ, ಜಿಲ್ಲಾ ಕಸಾಪ ಅಧ್ಯಕ್ಷನೆಂದು ಸ್ವಯಂಘೋಷಿಸಿಕೊಂಡು ಬೇರೆ ಬೇರೆ ಹುದ್ದೆಗಳನ್ನು ಸಹ ಸೃಷ್ಟಿಸಿ, ನಮೂದಿಸಿಕೊಳ್ಳುತ್ತಿರುವುದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ಪ್ರಕಾರ ತಪ್ಪಾಗಿದೆ ಎಂಬುದು ಹಲವರ ಅಭಿಪ್ರಾಯವೂ ಆಗಿದೆ.
ಪರಿಷತ್ತಿನ ಭವನದ ಕೀಲಿಕೈಯನ್ನು ಸುಪರ್ದಿಗೆ ಪಡೆದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿಕೊಟ್ಟು, ರವಿಕುಮಾರ್ ಪರಿಷತ್ತಿಗೆ ನೀಡಿರುವ ಪತ್ರದಂತೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡುವುದರ ಜೊತೆಗೆ ಸ್ವಯಂಘೋಷಿತ ಅಧ್ಯಕ್ಷನೆಂದು ಕಾರ್ಯ ನಿರ್ವಹಿಸುತ್ತಿರುವ ವಿ. ಹರ್ಷ ಅವರ ವಿರುದ್ಧ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಶಿಸ್ತು ಕ್ರಮ ಜರುಗಿಸುವಂತೆ ಎಂ.ಬಿ. ರಮೇಶ್ ಅವರು ಒತ್ತಾಯಿಸಿದ್ದಾರೆ.