ಆಯುಧ ಪೂಜೆ ಶುಕ್ರವಾರ (ಅ.೧೧) ಇರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಅಂಗಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವಾಹನಗಳನ್ನು ತೊಳೆದು ಪೂಜೆಗೆ ಸಿದ್ಧಗೊಳಿಸುವ ಕಾರ್ಯವನ್ನು ಜೊತೆಯಲ್ಲೇ ನಡೆಸುತ್ತಿದ್ದುದು ಕಂಡುಬಂದಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ಸಕ್ಕರೆ ಜಿಲ್ಲೆಯಲ್ಲಿ ಆಯುಧ ಪೂಜೆ ಹಬ್ಬಕ್ಕೆ ಸಡಗರ, ಸಂಭ್ರಮದ ಸಿದ್ಧತೆ ನಡೆದಿದೆ. ಅಂಗಡಿಗಳು, ವಾಹನಗಳನ್ನು ಸ್ವಚ್ಛಗೊಳಿಸಿಕೊಂಡಿರುವ ಸಾರ್ವಜನಿಕರು ಪೂಜಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಂಗೇರಿದ ವಾತಾವರಣ ಸೃಷ್ಟಿಯಾಗಿತ್ತು.
ಆಯುಧ ಪೂಜೆ ಶುಕ್ರವಾರ ಇರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಅಂಗಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವಾಹನಗಳನ್ನು ತೊಳೆದು ಪೂಜೆಗೆ ಸಿದ್ಧಗೊಳಿಸುವ ಕಾರ್ಯವನ್ನು ಜೊತೆಯಲ್ಲೇ ನಡೆಸುತ್ತಿದ್ದುದು ಕಂಡುಬಂದಿತು.
ಆಯುಧ ಪೂಜೆಗೆ ಅಗತ್ಯವಿರುವ ಸಾಮಾನುಗಳ ಖರೀದಿಗೆ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರಕ್ಕೆ ಆಗಮಿಸಿದ್ದರು. ನಗರದ ವಿ.ವಿ.ರಸ್ತೆ, ನೂರಡಿ ರಸ್ತೆ, ಪೇಟೆಬೀದಿ, ಹೊಸಹಳ್ಳಿ ಸರ್ಕಲ್, ಮಹಾವೀರ ಸರ್ಕಲ್, ಎಸ್.ಡಿ. ಜಯರಾಂ ವೃತ್ತ, ಕಲಾಮಂದಿರ ರಸ್ತೆ, ಮಹಿಳಾ ಸರ್ಕಾರಿ ಕಾಲೇಜು ಮುಂಭಾಗ, ಸೇಂಟ್ ಥಾಮಸ್ ಚರ್ಚ್ ಮುಂಭಾಗ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೂದುಗುಂಬಳ, ಹೂವು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣುಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರದಲ್ಲಿ ನಿರತರಾಗಿದ್ದರು.
೫೦ ರಿಂದ ೧೨೦ ರು.ಗೆ ಮಾರಾಟ:
ಸಣ್ಣ ಬೂದಗುಂಬಳದಿಂದ ದೊಡ್ಡ ಬೂದುಗುಂಬಳದವರೆಗೆ ಪ್ರತಿ ಕೆಜಿಗೆ ೨೦ ರು.ನಂತೆ ಮಾರಾಟ ಮಾಡಲಾಗುತ್ತಿತ್ತು. ಕನಿಷ್ಠ ೫೦ ರು.ನಿಂದ ಗರಿಷ್ಠ ೧೨೦ ರು.ವರೆಗೆ ಬೂದಗುಂಬಳ ಮಾರಾಟವಾಗುತ್ತಿತ್ತು. ದೊಡ್ಡ ಅಂಗಡಿ ಹಾಗೂ ದೊಡ್ಡ ವಾಹನಗಳ ಮಾಲೀಕರು ಅಗತ್ಯಕ್ಕೆ ತಕ್ಕಂತೆ ಬೂದಗುಂಬಳಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.
ಬಾಳೆ ಕಂದು ೩೦ ರಿಂದ ೧೦೦ ರು. ಬೆಲೆ ಇತ್ತು. ದೊಡ್ಡ ಗಾತ್ರದ ನಿಂಬೆ ಹಣ್ಣು ೧೦ ರು.ಗೆ ೧ ರಂತೆ ಮಾರಾಟವಾಗುತ್ತಿದ್ದರೆ, ಸಣ್ಣ ಗಾತ್ರದ ನಿಂಬೆಹಣ್ಣು ೧೦ ರು.ಗೆ ೨ರಂತೆ ಮಾರಾಟವಾಗುತ್ತಿತ್ತು.
ಸಾಮಾನ್ಯ ದಿನಗಳಲ್ಲಿ ೩೦ ರಿಂದ ೪೦ ರು.ವರೆಗೆ ಇದ್ದ ಸೇವಂತಿಗೆ ಹೂವಿನ ಬೆಲೆ ಹಬ್ಬದ ಪ್ರಯುಕ್ತ ಕನಿಷ್ಠ ೮೦ ರು.ನಿಂದ ೧೦೦ ರು.ವರೆಗೆ ತಲುಪಿತ್ತು. ಪ್ರತಿ ಮಾರು ಮಲ್ಲಿಗೆ ಹೂವು-೧೦೦ ರು., ಮರಳೆ ಹೂ-೧೦೦ ರು.. ಕನಕಾಂಬರ-೧೦೦ ರು., ಕಾಕಡ ಹೂ -೧೦೦ ರು.ಗುಲಾಬಿ ಒಂದಕ್ಕೆ ೧೫ ರಿಂದ ೨೦ ರು., ಬಿಡಿ ಗುಲಾಬಿ ೨೫೦ ಗ್ರಾಂಗೆ ೧೦೦ ರು. ಸೇರಿದಂತೆ ಹಲವು ಹೂವುಗಳ ಬೆಲೆ ಗಗನಮುಖಿಯಾಗಿತ್ತು.
ಹಾರಗಳ ಬೆಲೆಯಲ್ಲಿ ಹೆಚ್ಚಳ
ವಾಹನಗಳಿಗೆ ಹಾಕುವ ಹೂವಿನ ಹಾರಗಳ ಬೆಲೆ ದುಪ್ಪಟ್ಟು ಏರಿಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ ೧೦೦ ರು. ಇದ್ದ ಹೂವಿನ ಹಾರಗಳು ಹಬ್ಬದ ಪ್ರಯುಕ್ತ ೨೦೦ ರಿಂದ ೨೫೦ ರು., ದೊಡ್ಡ ಗುಲಾಬಿ ಹೂವಿನ ಹಾರಗಳು ೩೦೦ ರು.ನಿಂದ ೫೦೦ ರು. ವರೆಗೆ ಮಾರಾಟವಾಗುತ್ತಿದ್ದವು. ಆಯುಧ ಪೂಜೆಗೆ ಅಂಗಡಿ, ವಾಹನಗಳಿಗೆಲ್ಲಾ ಹೂವು ಹಾಗೂ ನಿಂಬೆ ಹಣ್ಣಿಗೆ ಅವಶ್ಯಕತೆ ಇರುವುದರಿಂದ ಇವರೆಡಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ವ್ಯಾಪಾರಸ್ಥರೂ ಬೆಲೆಯಲ್ಲಿ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದು ಕಂಡುಬಂತು. ಜನತೆ ಒಂದಷ್ಟು ಚೌಕಾಶಿ ಮಾಡಿ ಸಾಮಗ್ರಿಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದರು.
ಹಣ್ಣುಗಳ ಬೆಲೆಯಲ್ಲಿ ಏರಿಕೆ
ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಕೊಂಚ ಏರಿಕೆಯಾಗಿತ್ತು. ಏಲಕ್ಕಿ ಬಾಳೆಹಣ್ಣು ಪ್ರತಿ ಕೆಜಿಗೆ ೭೦ ರಿಂದ ೧೦೦ ರು., ದಾಳಿಂಬೆ-೧೬೦-೨೦೦ ರು., ಸೇಬು-೧೫೦ ರಿಂದ ೨೦೦ ರು., ಮಿಕ್ಸ್-೧೫೦ ರು., ದ್ರಾಕ್ಷಿ-೧೦೦-೧೮೦ ರು., ಮೂಸಂಬಿ-೮೦ ರು., ಕಿತ್ತಳೆ-೮೦ ರು., ಕಪ್ಪು ದ್ರಾಕ್ಷಿ- ೧೨೦ ರು., ಸೀಬೆಹಣ್ಣು- ೧೦೦ ರು., ಮೂಸಂಬಿ-೧೦೦ ರು., ಕರ್ಬೂಜ -೪೦ ರು., ಅನಾನಸ್ -೬೦ ರು., ಪಚ್ಚಬಾಳೆ ೫೦ ರು. ವರೆಗೆ ಮಾರಾಟವಾಗುತ್ತಿದ್ದವು.
ತರಕಾರಿ ಬೆಲೆ ಸಾಮಾನ್ಯ
ತರಕಾರಿ ಬೆಲೆಯೂ ಸಾಮಾನ್ಯವಾಗಿತ್ತು. ಮಿಕ್ಸ್ ತರಕಾರಿ ಕೆ.ಜಿ.ಗೆ ೬೦ ರು., ಪ್ರತಿ ಕೆಜಿ ಕ್ಯಾರೆಟ್-೫೦ ರೂ., ನಾಟಿ ಬಿನೀಸ್-೬೦ ರು., ಗೆಡ್ಡೆಕೋಸು-೫೦ ರೂ., ಟೊಮೆಟೋ ಕೆಜಿ ೬೦ ರು., ಬೀಟ್‌ರೂಟ್- ೪೦ ರು., ಬದನೆಕಾಯಿ-೪೦ ರು., ಹೂಕೋಸು, ೪೦ ರು., ಹಾಗಲಕಾಯಿ-೪೦ ರು., ಬೆಂಡೇಕಾಯಿ-೪೦ ರು., ಆಲೂಗಡ್ಡೆ-೪೦ ರು., ಅವರೆಕಾಯಿ-೬೦ ರು., ಕೊತ್ತಂಬರಿ ಸೊಪ್ಪು ಪ್ರತಿ ಕಂತೆಗೆ ೨೦ ರಿಂದ ೨೫ ರು. ನಿಗದಿಪಡಿಸಲಾಗಿತ್ತು.
ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆ
ಆಯುಧ ಪೂಜೆ ಹಬ್ಬದಲ್ಲಿ ಸಿಹಿ ತಿನಿಸುಗಳನ್ನು ಪೂಜೆಗೆ ಇಡುವುದರಿಂದ ಹಾಗೂ ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಕಂಡುಬಂದಿರುವುದರಿಂದ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬೂಂದಿ-೨೫೦ ರು., ಮಿಲ್ಕ್ ಬರ್ಫಿ-೫೨೦ ರು., ಹಾರ್ಲಿಕ್ಸ್ ಬರ್ಫಿ-೬೨೦ ರು., ಲಾಡು-೩೪೦ ರು., ಮೈಸೂರು ಪಾಕ್-೬೬೦ ರು., ಜಹಂಗೀರ್-೨೮೦ ರು., ಸೋಂಪಾಪುಡಿ-೫೮೦ ರು., ಹಲ್ವಾ-೪೦೦ ರು. ಸೇರಿದಂತೆ ಅನೇಕ ಸಿಹಿ ಪದಾರ್ಥಗಳ ಬೆಲೆ ಕನಿಷ್ಠ ೩೦ ರು.ನಿಂದ ೫೦ ರು.ವರೆಗೆ ಹೆಚ್ಚಾಗಿತ್ತು. ಮತ್ತು ಪ್ರತಿ ಕೆಜಿ ಸ್ಪೆಷಲ್ ಖಾರ-೩೮೦ ರು., ಸಾಮಾನ್ಯ ಖಾರ-೩೦೦ ರು.ವರೆಗೆ ಮಾರಾಟವಾಗುತ್ತಿದ್ದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.