ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವತಿಯಿಂದ ನಿರ್ಮಾಣಗೊಂಡಿರುವ ಶೌಚಾಲಯವನ್ನು ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳಿಲ್ಲದೆ ಬೀಗವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡಲಾಗಿದೆ. ಸುಮಾರು 8 ರಿಂದ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಶೌಚಾಲಯದಲ್ಲಿ ಪುರುಷ- ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ ಐದು ಶೌಚ ಗೃಹಗಳಿವೆ. ಮೂತ್ರ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ, ಒಂದು ಸ್ನಾನಗೃಹವನ್ನೂ ನಿರ್ಮಿಸಲಾಗಿದೆ. ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗಿದೆ.
ಒಂದು ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಸಾರ್ವಜನಿಕ ಶೌಚಾಲಯ ಸುಣ್ಣ- ಬಣ್ಣ ಕಾಣದೆ ಬೀಗ ಹಾಕಿದ ಸ್ಥಿತಿಯಲ್ಲಿತ್ತು. ಇದೇ ವೇಳೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ವೇಳೆ ಈ ಶೌಚಾಲಯಕ್ಕೂ ಸುಣ್ಣ-ಬಣ್ಣ ಬಳಿಯಲಾಯಿತು. ಸಮ್ಮೇಳನದ ವೇಳೆಗೂ ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಲೇ ಇಲ್ಲ. ಅದಕ್ಕೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಸಮರ್ಪಕ ಉತ್ತರ ನೀಡಲಿಲ್ಲ.ಸಾರ್ವಜನಿಕ ಬಳಕೆಗೆ ಸಿಗದೆ ಬೀಗ ಜಡಿದ ಸ್ಥಿತಿಯಲ್ಲೇ ಇದ್ದ ಶೌಚಾಲಯಕ್ಕೆ ಈಗ ಬಂಧನದಿಂದ ಏಕಾಏಕಿ ಮುಕ್ತಿ ದೊರಕಿಸಲಾಗಿದೆ. ಈ ಹೈ- ಟೆಕ್ ಶೌಚಾಲಯದ ಒಳಗೆ ಅಳವಡಿಸಿರುವ ಬಾಗಿಲುಗಳು ಗುಣಮಟ್ಟದಿಂದ ಕೂಡಿಲ್ಲದಿರುವುದು. ಮಹಿಳೆಯರ ವಿಭಾಗದ ಶೌಚಾಲಯದ ಗೋಡೆಗಳು ಇನ್ನೂ ಎತ್ತರದಲ್ಲಿ ನಿರ್ಮಾಣಗೊಳ್ಳಬೇಕಿತ್ತು ಎಂಬ ದೂರುಗಳು ಆರಂಭದ ದಿನವೇ ಸಾರ್ವಜನಿಕರಿಂದ ಕೇಳಿಬಂದವು.