ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇಂತಹ ಘಟನೆ ಮರುಕಳಿಸದಂತೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಶಾಸಕ ದರ್ಶನ್ ದ್ರುವನಾರಾಯಣ್ ತಿಳಿಸಿದರು.ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಜೊತೆಗೂಡಿ ಹಲ್ಲರೆ ಗ್ರಾಮಸ್ಥರೊಡನೆ ಸಭೆ ನಡೆಸಿ ಮಾತನಾಡಿದರು.
ಹಲ್ಲರೆ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲ. ದೇಶದ ಕಾನೂನು ಯಾರ ಸ್ವತ್ತಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಗ್ರಾಮದಲ್ಲಿ ಶಾಂತಿಯುತವಾದ ಬದುಕಿಗೆ ಅವಕಾಶ ಕಲ್ಪಿಸಿಕೊಡಲು ನಾನು ಬದ್ಧ ಎಂದು ನೊಂದವರಿಗೆ ಆತ್ಮಸ್ಥೈರ್ಯ ಹೇಳಿದರು.ಇನ್ನು ಇಂತಹ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಕಾನೂನಿನ ಬಗ್ಗೆ ಗೌರವ ಮತ್ತು ನಂಬಿಕೆ ಇರಬೇಕು. ನಾನು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ ಅಂದರೆ ಅದಕ್ಕೆ ಬಾಬಾ ಸಾಹೇಬರು ಮತ್ತು ಸಂವಿಧಾನ ಕಾರಣ. ನಮಗೆಲ್ಲರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯ ನೀಡಿದ್ದಾರೆ. ಅದರಂತೆ ಈ ಘಟನೆಗೆ ನ್ಯಾಯ ದೊರಕಿಸಿಕೊಡುವವರೆಗೂ ಬಾಬಾ ಸಾಹೇಬರಂತೆ ಹೋರಾಡಿ ನಾವು ನಿಮ್ಮ ಜೊತೆ ಇದ್ದು ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವ ಕೆಲಸವನ್ನು ಪೂರ್ಣ ಮಾಡುತ್ತೇನೆ ಎಂದರು.
ಜಿಲ್ಲೆಯಲ್ಲಿಯೇ ಹಿಂದೆಂದೂ ಕೂಡ ಯಾವುದೇ ರಾಷ್ಟ್ರ ನಾಯಕರಿಗೂ ಕಿಡಿಗೇಡಿಗಳು ಅಪಮಾನ ಮಾಡಲು ಬೆಚ್ಚಿ ಬೀಳಬೇಕು. ಅಂತಹ ಕಠಿಣವಾದ ಕಾನೂನು ಕ್ರಮಕ್ಕೆ ನಾನು ಪೊಲೀಸರಲ್ಲಿ ಆಗ್ರಹಿಸಿದ್ದೇನೆ ಎಂದು ಅವರು ತಿಳಿಸಿದರು.ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಘಟನೆ ಸಂಬಂಧ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುತ್ತೇವೆ. ಶಾಸಕ ದರ್ಶನ್ ದ್ರುವ ನಾರಾಯಣ್ ಅವರು ನಮಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ತೆಗೆದುಕೊಳ್ಳುವ ಕ್ರಮ ಇತಿಹಾಸವಾಗಬೇಕು. ಅಂತಹ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ. ಹಲ್ಲರೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲ. ಶಾಂತಿಯುತವಾದ ಬದುಕು ಸಾಗಿಸಲು ಪೊಲೀಸ್ ಅಧಿಕಾರಿಗಳಾದ ನಾವು ಅನುವು ಮಾಡಿಕೊಡುತ್ತೇವೆ ಎಂದು ಅವರು ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ, ಗ್ರಾಮದಲ್ಲಿ ನಡೆದಿರುವ ಘಟನೆ ಸಂಬಂಧ ಎರಡು ಸಮಾಜದ ಮುಖಂಡರನ್ನು ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದೇನೆ. ಅವರು ಕೂಡ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಪ್ರಗತಿಯಲ್ಲಿದ್ದು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ನೊಂದವರಿಗೆ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್, ಕಾಸನೂರ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಡಿವೈಎಸ್ಪಿ ರಘು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ತಾಲೂಕು ನಾಯಕರ ಸಂಘದ ಅಧ್ಯಕ್ಷ ನಾಗರಾಜ್, ಮಹದೇವ್ ಮೊದಲಾದವರು ಇದ್ದರು.