ಸಾಹಿತಿಗಳಿಂದ ತುಂಬಿರುವ ವಿಶಿಷ್ಟ ಜಿಲ್ಲೆ ಮಂಡ್ಯ: ಸಾಹಿತಿ ಕ್ಯಾತನಹಳ್ಳಿ ರಾಮಣ್ಣ

KannadaprabhaNewsNetwork |  
Published : Jun 02, 2024, 01:46 AM IST
1ಕೆಎಂಎನ್‌ಡಿ-15ಮಂಡ್ಯದ ಕಾವೇರಿ ವನದಲ್ಲಿ ‘ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ’ ವತಿಯಿಂದ ವೇದಿಕೆ ಅಧ್ಯಕ್ಷ ಸಿ.ಸಿದ್ದರಾಜು ಆಲಕೆರೆ ರಚಿಸಿರುವ ‘ಸಕ್ಕರೆ ಸೀಮೆಯ ಲೇಖಕರ ಪರಿಚಯ’ ಭಾಗ-1, ಭಾಗ-2ನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಿ.ಎಂ.ಶ್ರೀಕಂಠಯ್ಯ, ಪುತಿನ, ಸುಜನ, ಕೆ.ಎಸ್.ನರಸಿಂಹಸ್ವಾಮಿ, ಸೀತಾಸುತ, ಬೊಮ್ಮರಸೇಗೌಡ ಹೀಗೆ ಸಾಕಷ್ಟು ಸಾಹಿತಿಗಳು ಮಂಡ್ಯದವರು ಎಂಬುದು ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವಂತೆಯೇ ಹೆಚ್ಚಿನ ಸಾಹಿತಿಗಳನ್ನು ಒಳಗೊಂಡ ವಿಶಿಷ್ಟ ಜಿಲ್ಲೆಯಾಗಿದ್ದು, ಈ ಜಿಲ್ಲೆಯಲ್ಲಿರುವ ಲೇಖಕರನ್ನು ಪರಿಚಯಿಸಿರುವ ಕೃತಿಯನ್ನು ಹೊರತಂದಿರುವುದು ಉತ್ತಮ ಕೆಲಸ ಎಂದು ಹಿರಿಯ ಸಾಹಿತಿ ಕ್ಯಾತನಹಳ್ಳಿ ರಾಮಣ್ಣ ಹೇಳಿದರು.

ನಗರದ ಕಾವೇರಿ ವನದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಬಳಿ ‘ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ’ ವತಿಯಿಂದ ವೇದಿಕೆ ಅಧ್ಯಕ್ಷ ಸಿ.ಸಿದ್ದರಾಜು ಆಲಕೆರೆ ರಚಿಸಿರುವ ‘ಸಕ್ಕರೆ ಸೀಮೆಯ ಲೇಖಕರ ಪರಿಚಯ’ ಭಾಗ-1, ಭಾಗ-2ನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯರು ಕಿರಿಯರೆನ್ನದೇ ಎಲ್ಲ ಲೇಖಕರ ವಿವರಗಳನ್ನು ಸಂಗ್ರಹಿಸಿರುವುದು ಸಾಹಿತ್ಯಾಸಕ್ತ ಓದುಗರಿಗೆ ಬಹಳ ಉಪಯುಕ್ತವಾದುದು. ಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸುವುದರಲ್ಲಿಯೂ ಇಂತಹ ಕೃತಿಗಳು ಉಪಯುಕ್ತವಾದುದು ಎಂದರು.

ನಿವೃತ್ತ ಉಪನ್ಯಾಸಕರು, ಲೇಖಕ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಹೊರತರಲಾದ ಪುಣ್ಯಕೋಟಿ ಮತ್ತು ಸುವರ್ಣ ಮಂಡ್ಯ ಕೃತಿಗಳಲ್ಲೂ ಇಂತಹ ಪ್ರಯತ್ನ ನಡೆದಿತ್ತು. ಆದರೆ ಸಮಗ್ರವಾಗಿ ಎಲ್ಲರನ್ನೂ ಹಿಡಿದಿಡಲು ಸಾಧ್ಯವಾಗಿರಲಿಲ್ಲ. ಪ್ರೊ.ಸಿದ್ದರಾಜು ಆಲಕೆರೆ ಅವರು ಸಾಕಷ್ಟು ಲೇಖಕರನ್ನು ಈ ಕೃತಿಯ ಎರಡೂ ಭಾಗಗಳಲ್ಲಿ ಪರಿಚಯಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬಿ.ಎಂ.ಶ್ರೀಕಂಠಯ್ಯ, ಪುತಿನ, ಸುಜನ, ಕೆ.ಎಸ್.ನರಸಿಂಹಸ್ವಾಮಿ, ಸೀತಾಸುತ, ಬೊಮ್ಮರಸೇಗೌಡ ಹೀಗೆ ಸಾಕಷ್ಟು ಸಾಹಿತಿಗಳು ಮಂಡ್ಯದವರು ಎಂಬುದು ಹೆಮ್ಮೆಯ ಸಂಗತಿ. ಆದರೆ, ಅವರೆಲ್ಲರ ಪರಿಚಯ ಬಹುತೇಕರಿಗಿಲ್ಲ. ಹಾಗಾಗಿ ಲೇಖಕರ ಪರಿಚಯಿಸುವ ಪುಸ್ತಕ ಮುಂದಿನ ತಲೆಮಾರಿನವರಿಗೆ ಬಹಳ ಉಪಯುಕ್ತವಾದವು ಎಂದು ಹೇಳಿದರು.

ಬಳಿಕ ಕೃತಿಕರ್ತೃ ಪ್ರೊ.ಸಿದ್ದರಾಜು ಆಲಕೆರೆ ಮಾತನಾಡಿ, ಈ ಪುಸ್ತಕದಲ್ಲಿ ಲೇಖಕರ ಭಾವಚಿತ್ರದೊಂದಿಗೆ ಅವರನ್ನು ಸರಳವಾಗಿ ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಆದರೆ ಎಲ್ಲಿಯೂ ಯಾರನ್ನೂ ವೈಭವೀಕರಿಸಿ, ಸತ್ಯಕ್ಕೆ ದೂರವಾದ ಸಂಗತಿಯನ್ನು ಇಲ್ಲಿ ದಾಖಲಿಸಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಇಟಿಯ ಡಾ.ರಾಮಲಿಂಗಯ್ಯ ಮತ್ತು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವಚಿದಂಬರ್, ಲಿಂಗಣ್ಣ ಬಂಧುಕಾರ್, ರೈತಸಂಘದ ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಎಲ್.ಅಪ್ಪಾಜಯ್ಯ, ಧನಂಜಯ ದರಸಗುಪ್ಪೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ