ಹೆಚ್.ಕೆ.ಅಶ್ವಥ್, ಹಳುವಾಡಿ
ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಗಸ್ಟ್ ಮಧ್ಯ ಭಾಗದ ವೇಳೆಗೆ ಸುಮಾರು ಅರ್ಧದಷ್ಟು ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತಾದರೂ ಇದುವರೆಗೆ ಶೇ.11.7 ರಷ್ಟು ಬಿತ್ತನೆ ಮಾಡಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಶೇ.20.1 ರಷ್ಟು ಕ್ಷೀಣಿಸಿದೆ.
ಬೋರ್ ವೆಲ್, ಕೆರೆ ಆಧಾರಿತ, ಪಂಪ್ ಸೆಟ್ ಅವಲಂಬಿತ ಕೃಷಿ ಪ್ರದೇಶ, ನದಿ ನೀರಿನ ಆಶ್ರಿತ ಜಮೀನುಗಳಲ್ಲಿ ರೈತರು ಈಗಾಗಲೇ ಬಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ, ನಾಲೆ ನೀರು ಅವಲಂಬಿತ, ಮಳೆ ಆಧಾರಿತ ಪ್ರದೇಶಗಳಲ್ಲಿ ಇನ್ನೂ ಯಾವುದೇ ಬಿತ್ತನೆ ಕಾರ್ಯ ನಡೆದಿಲ್ಲ.ಈ ವರ್ಷ 2,06,835 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ 24,123 (ಶೇ.11.7) ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 61,685 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ.32.1 ರಷ್ಟು ಸಾಧನೆ ಮಾಡಲಾಗಿತ್ತು.
ರಾಗಿ 63,385 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ನಿರೀಕ್ಷೆ ಇತ್ತು. 102 ಹೆಕ್ಟೇರ್ ಪ್ರದೇಶದಲ್ಲಿ (ಶೇ.31 ರಷ್ಟು) ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷ 3347 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಕಬ್ಬು 42,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು, ಆದರೆ, ಮಳೆ ಕೊರತೆಯಿಂದ ಕೇವಲ 9033 (ಶೇ.20 ರಷ್ಟು) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದೆ.
ಜಿಲ್ಲೆಯಲ್ಲಿ ಅಲಸಂದೆ, ನೆಲಗಡಲೆ, ಭತ್ತ, ರಾಗಿ, ಮುಸುಕಿನಜೋಳ, ತೊಗರಿ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ನೀರಿನ ಕೊರತೆಯಿಂದಾಗಿ ಕೊಂಡುಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ 7 ತಾಲೂಕುಗಳಿಂದ 8239 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದರೂ 11,600 ಕ್ವಿಂಟಾಲ್ ಲಭ್ಯವಿದೆ. ಸದ್ಯಕ್ಕೆ 660 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ಇದರಲ್ಲಿ 385 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ.
ಜಿಲ್ಲೆಯ ಒಟ್ಟು 47,603 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಉದ್ದು, ಎಳ್ಳು, ಮುಸುಕಿನ ಜೋಳ, ಅಲಸಂದೆ ಬೆಳೆಗಳಿದ್ದು, ಉದ್ದು ಮತ್ತು ಎಳ್ಳಿನ ಬೆಳೆ ಕಟಾವು ಮುಗಿದಿದೆ. ಆದರೆ, ಅಲಸಂದೆ 9957 ಹೆಕ್ಟೇರ್ ಪ್ರದೇಶ, ಮುಸುಕಿನ ಜೋಳ 50 ಹೆಕ್ಟೇರ್ ಪ್ರದೇಶದಲ್ಲಿ ಬಾಡುತ್ತಿದೆ. 4267 ಹೆಕ್ಟೇರ್ ಕಬ್ಬಿನ ಬೆಳೆ ಸೇರಿ ಒಟ್ಟು 14,274 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿದೆ.
ಕಳೆದ ಮಾರ್ಚ್ ಆರಂಭದಿಂದ ಮೇ ಅಂತ್ಯದವರೆಗೆ ಪೂರ್ವ ಮುಂಗಾರು ಶೇ.12 ರಷ್ಟು ಕೊರತೆಯಾಗಿದೆ. ಜೂ.1ರಿಂದ ಆಗಸ್ಟ್ ಆರಂಭದವರೆಗೆ ಶೇ.42 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ 290. 2 ಮಿಮಿ ಮಳೆಯಾಗಬೇಕಿತ್ತು. ಆದರೆ, 233.5 ರಷ್ಟು ಮಳೆಯಾಗಿ ಶೇ.25 ರಷ್ಟು ಮಳೆ ಕೊರತೆ ಉಂಟಾಗಿದೆ.
ಪೂರ್ವ ಮುಂಗಾರಿನ ಈ ಮೂರು ತಿಂಗಳಲ್ಲಿ ವಾಡಿಕೆ 159 ಮಿ ಮಿ ಮಳೆಯಾಗಬೇಕಿತ್ತು, ಇದರಲ್ಲಿ 139.8 ಮಿ ಮಿ ಮಳೆಯಾಗಿದ್ದು, ಶೇ.12 ರಷ್ಟು ಮಳೆ ಕೊರತೆಯಾಗಿದೆ.