ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನ: ಗೊರುಚ ನೀಡಿದ 4 ತಂತ್ರಜ್ಞಾನ ಸಲಹೆಗಳು

Published : Dec 21, 2024, 09:53 AM IST
Mandya

ಸಾರಾಂಶ

 ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಗೊರುಚ ಅ‍ವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಹೊಂದಿಸುವ ಅನಿವಾರ್ಯತೆ ಹಾಗೂ ತಂತ್ರಜ್ಞಾನದ ಜತೆ ಕನ್ನಡವನ್ನು ಜೋಡಿಸಿ ಸಶಕ್ತಗೊಳಿಸುವ ಕುರಿತು ನಾಲ್ಕು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. 

ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಗೊರುಚ ಅ‍ವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಹೊಂದಿಸುವ ಅನಿವಾರ್ಯತೆ ಹಾಗೂ ತಂತ್ರಜ್ಞಾನದ ಜತೆ ಕನ್ನಡವನ್ನು ಜೋಡಿಸಿ ಸಶಕ್ತಗೊಳಿಸುವ ಕುರಿತು ನಾಲ್ಕು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅವು ಹೀಗಿವೆ.

1. ತಂತ್ರಜ್ಞಾನದ ಕನ್ನಡಕ ಬೇಕು

ತಂತ್ರಜ್ಞಾನದ ಕನ್ನಡಕವಿಲ್ಲದೆ ಇಂದು ಜಗತ್ತನ್ನು ನೋಡುವುದೇ ಕಷ್ಟವಾಗಿದೆ. ಕನ್ನಡ ಭಾಷೆಯನ್ನು, ಕನ್ನಡ ಲಿಪಿಯನ್ನು ತಂತ್ರಜ್ಞಾನಕ್ಕೆ ಜೋಡಿಸುವ ವಿಚಾರದಲ್ಲೇ ಇರುವ ಗೊಂದಲಗಳನ್ನು ಮೊದಲು ಪರಿಹರಿಸುವುದು ಅಗತ್ಯ. ಜ್ಞಾನ, ತಂತ್ರಜ್ಞಾನ ಜಾಗತಿಕವಾಗಿ ಅಗಾಧವಾಗಿ ಬೆಳೆದಿದೆ. ಆದರೆ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಕನ್ನಡ ಭಾಷೆಯಲ್ಲೇ ಪಡೆದುಕೊಳ್ಳಲು ಸರಿಯಾದ ವ್ಯವಸ್ಥೆ ನಮ್ಮಲ್ಲಿ ಇರಬೇಕಾಗುತ್ತದೆ. ಈ ಕುರಿತು ಸರ್ಕಾರ ಮತ್ತು ತಂತ್ರಜ್ಞಾನ ಪರಿಣತರು ಗಂಭೀರ ಚಿಂತನೆ ನಡೆಸಬೇಕಿದೆ. ರಾಜಕಾರಣದ ಜೊತೆಗೆ ಜ್ಞಾನಕಾರಣ, ಜನಕಾರಣಗಳ ಬಗ್ಗೆ ನಮ್ಮ ಸರ್ಕಾರಗಳು ಗಮನ ಹರಿಸಲೇಬೇಕು. ಇವುಗಳಲ್ಲಿ ಬಹಳ ಮುಖ್ಯವಾದುದು ಜನಭಾಷೆಯಲ್ಲಿ ಜ್ಞಾನದ ಪ್ರಸಾರ. ಇದಕ್ಕೆ ಅಗತ್ಯವಾದ ತಾಂತ್ರಿಕ ಸಿದ್ಧತೆ ಮತ್ತು ವ್ಯವಸ್ಥೆ ಮಾಡುವುದು ಈ ಕಾಲಕ್ಕೆ ಸರ್ಕಾರದ ದೊಡ್ಡ ಜವಾಬ್ದಾರಿ. ಅದಕ್ಕೆ ನೆರವು ನೀಡಬಲ್ಲ ಕನ್ನಡಿಗ ತಾಂತ್ರಿಕ ಸಂಪನ್ನರ ಸಂಪರ್ಕ ಮಾಡಿ ಕನ್ನಡವನ್ನು ''ಅರಿವಿನ ಭಾಷೆ''ಯಾಗಿ, ''ಅನ್ನದ ಭಾಷೆ''ಯಾಗಿ ಬೆಳೆಸುವುದು ಅಗತ್ಯ.

2. ಗೂಗಲ್, ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ

ಜಗತ್ತಿನಲ್ಲಿ ಗೂಗಲ್ ಎನ್ನುವ ಜಗದ್ಗುರು ಜ್ಞಾನದ ಪ್ರಸಾರ ಮಾಡುವುದು, ಪಾಠಗಳನ್ನು ಹೇಳಿಕೊಡುವುದು ಇಂಗ್ಲಿಷ್ ಭಾಷೆಯಲ್ಲೇ. ಕನ್ನಡ ಭಾಷೆ ಮೂಲಕವೂ ಲೋಕವನ್ನು ಅರಿಯಲು ಸಾಧ್ಯ, ಜ್ಞಾನವನ್ನು ಪಡೆಯಲು ಸಾಧ್ಯ ಎನ್ನುವುದನ್ನು ನಾವೀಗ ತೋರಿಸಿ ತಿಳಿಸದಿದ್ದರೆ, ಮುಂದಿನ ಪೀಳಿಗೆಯ ಮಕ್ಕಳು ''ಜ್ಞಾನ ಎಂದರೆ ಇಂಗ್ಲಿಷ್'' ಎಂದು ನಂಬುವ ಅಪಾಯವಿದೆ. ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ, ಕನ್ನಡ ಜ್ಞಾನದ ಭಾಷೆಯೂ ಆಗುತ್ತದೆ.

3. ಕನ್ನಡದಲ್ಲೇ ದತ್ತಾಂಶ ತುಂಬುವ ಪ್ರಯತ್ನ ಮಾಡಿ

ಕನ್ನಡದಲ್ಲಿ ದತ್ತಾಂಶ ( ಡೇಟಾ) ತುಂಬದಿದ್ದರೆ ಅಂತರ್ಜಾಲದಲ್ಲಿ ಸಿಗುವ ಮಾಹಿತಿ ಸರಿಯಾಗಿ ಇರುವುದಾದರೂ ಹೇಗೆ? ಇದಕ್ಕೆ ಸರ್ಕಾರ ನೇತೃತ್ವ ವಹಿಸುವುದು, ಅಗತ್ಯ ವ್ಯವಸ್ಥೆ ರೂಪಿಸುವುದು ಅದು ನಿರ್ವಹಿಸಬೇಕಾದ ಸಾಮಾಜಿಕ ಕರ್ತವ್ಯ. ಆದರೆ, ಸರ್ಕಾರವನ್ನು ನಡೆಸುವ ಜನಪ್ರತಿನಿಧಿಗಳಲ್ಲಿ, ಆಡಳಿತದ ಕೀಲಿಕೈಗಳನ್ನು ಹೊಂದಿರುವ ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾಪ್ರೇಮದ ಕೊರತೆ ಇರುವಂತೆ ಕಾಣುತ್ತಿದೆ. ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕದಿದ್ದರೆ, ಆಸಕ್ತಿ ವಹಿಸಿ ಅದರ ಅಗತ್ಯಗಳನ್ನು ಪೂರೈಸದಿದ್ದರೆ ಕನ್ನಡ ಭಾಷೆ ಬೆಳೆಯುವುದಿಲ್ಲ. ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ ''ಅಂತರ್ಜಾಲವೆಂದರೆ ಆಂಗ್ಲಭಾಷೆ'' ಎಂಬ ನಂಬಿಕೆಯಲ್ಲೇ ಕೆಲಸ ಮಾಡುತ್ತಾರೆ. ಅವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸಿ ಸಶಕ್ತಗೊಳಿಸುವ ಕಾರ್ಯದಲ್ಲಿ ಆಸಕ್ತರಾಗುವುದು ಅವರ ಆಡಳಿತಕರ್ತವ್ಯವೂ ಆಗಿದೆ.

4. ಕನ್ನಡ ಮತ್ತು ತಂತ್ರಾಂಶದ ಪ್ರೀತಿಯ ಅನುಬಂಧವನ್ನು ಸರ್ಕಾರವೇ ಅಧಿಕೃತಗೊಳಿಸುವುದು ಅಗತ್ಯ. ಕನ್ನಡದ ಹಲವು ಸಾಹಿತಿಗಳು ಇದರ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಈಗಾಗಲೇ ಪ್ರಯತ್ನಿಸಿದ್ದಾರೆ. ''ಕನ್ನಡ ಕಸ್ತೂರಿ'' ಹೊಸತಂತ್ರಾಂಶ ಅಧಿಕೃತವಾಗಿ ಬಿಡುಗಡೆಯಾದರೆ, ಗೂಗಲ್, ಯಾಂತ್ರಿಕ ಬುದ್ದಿಮತ್ತೆಯಲ್ಲೂ ಕನ್ನಡದ ಕಂಪು ಪಸರಿಸಬಹುದು. ಆ ತಂತ್ರಾಂಶದ ಮೂಲಕ ದತ್ತಾಂಶವೂ ಸರಿಗನ್ನಡದಲ್ಲೇ ಸರಿಯಾಗಿ ತಲುಪಬಹುದು.

PREV
Get the latest news and developments from Mandya district (ಮಂಡ್ಯ ಸುದ್ದಿ) — covering local politics, agriculture, civic issues, water conservation, tourism, community affairs and more on Kannada Prabha News.

Recommended Stories

ವೀರವೈಶ ಲಿಂಗಾಯತ ಸಮಾಜವನ್ನು ಒಡೆದು ಆಳಲು ನಿರಂತರ ಪ್ರಯತ್ನ: ಬಿ.ವೈ.ವಿಜಯೇಂದ್ರ ಕಿಡಿ
ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ ಒಂದೇ: ಶಂಕರ ಎಂ.ಬಿದರಿ