‘ಜಾಗತಿಕವಾಗಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಈ ನಡುವೆ ಹಳೆ ಮತ್ತು ಹೊಸ ಜಗತ್ತಿನ ನಡುವೆ ಕೊಂಡಿಯಾಗಿ ತಂತ್ರಜ್ಞಾನ ಕೆಲಸ ಮಾಡುತ್ತಿದೆ ಎಂದು ಐಟಿ ತಜ್ಞ ಓಂ ಶಿವಪ್ರಕಾಶ್ ತಿಳಿಸಿದ್ದಾರೆ.
ಮಂಡ್ಯ : ‘ಜಾಗತಿಕವಾಗಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಈ ನಡುವೆ ಹಳೆ ಮತ್ತು ಹೊಸ ಜಗತ್ತಿನ ನಡುವೆ ಕೊಂಡಿಯಾಗಿ ತಂತ್ರಜ್ಞಾನ ಕೆಲಸ ಮಾಡುತ್ತಿದೆ. ನಾವು ಅಭಿವೃದ್ಧಿಪಡಿಸಿದ ಕಿಟೆಲ್ ಫಾಂಟ್ ಅನ್ನು ಇಂದಿನ ಕೆಲವು ರೀಲ್ಸ್ ಮಾಡುವವರೂ ಬಳಸುತ್ತಿರುವುದು ಒಂದೊಳ್ಳೆ ಬೆಳವಣಿಗೆ’ ಎಂದು ಐಟಿ ತಜ್ಞ ಓಂ ಶಿವಪ್ರಕಾಶ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ‘ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು’ ಎಂಬ ವಿಷಯವಾಗಿ ಶನಿವಾರ ಮಾತನಾಡಿದರು.
‘ಇದೀಗ ಅಭಿವೃದ್ಧಿಯಾಗಿರುವ ಕಿಟೆಲ್ ಫಾಂಟ್ ಅಭಿವೃದ್ಧಿ ಕುರಿತಾದ ತಳಮಟ್ಟದ ಕಾರ್ಯ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯಿತು. ಈ ಫಾಂಟ್‌ನ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳು ಸೋಷಲ್ ಮೀಡಿಯಾ ಮೂಲಕ ಆದ ಕ್ರೌಡ್ ಸೋರ್ಸಿಂಗ್ ಆಗಿವೆ. ಹಳೆಯ ಪುಸ್ತಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಿಡುವ ನಿಟ್ಟಿನಲ್ಲಿ ನಾವು ಈ ಕಾರ್ಯಕ್ಕೆ ಕೈ ಹಾಕಿದೆವು. ಆದರೆ ಆ ಹಳೆಯ ಫಾಂಟ್ ಈಗ ಜನರಿಗೆ ಇಷ್ಟವಾಗುತ್ತಿದೆ’ ಎಂದೂ ಅವರು ಹೇಳಿದರು.
‘ಸಾಮಾಜಿಕ ಜಾಲತಾಣಗಳಿಂದಾಗಿ ದಶಕಗಳ ಹಿಂದೆ ಸಾಕಷ್ಟು ಮಂದಿ ಬ್ಲಾಗರ್ಸ್ ಹುಟ್ಟಿಕೊಂಡರು. ಇವರನ್ನು ಸಾಹಿತಿಗಳೆಂದು ಒಪ್ಪುತ್ತಾರೋ ಇಲ್ಲವೋ ಅನ್ನೋದು ಬೇರೆ ಮಾತು. ಆದರೆ ಸಾಹಿತ್ಯಕ ಚಟುವಟಿಕೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಇದು ನಾಂದಿ ಹಾಡಿತು. ಹೀಗೆ ಒಂದು ಸಾಹಿತ್ಯಕ ಸಮುದಾಯ ಕಟ್ಟಲು, ಸಾಮಾನ್ಯ ಜನರ ಮಾತುಕತೆಗೆ, ಆಲೋಚನೆಗಳ ವಿನಿಮಯಕ್ಕೆ ಸಹಕಾರಿಯಾಯಿತು. ಈ ಎಲ್ಲ ಬೆಳವಣಿಗೆಗಳು ಕನ್ನಡ ಉಳಿಸಲು, ಕನ್ನಡವನ್ನು ತಂತ್ರಜ್ಞಾನದ ಮೂಲಕ ಬೆಳೆಸಲೂ ಸಹಕಾರಿಯಾಯಿತು’ ಎಂದರು.
‘ಇದರ ಜೊತೆಗೆ ಕನ್ನಡದ ಲಕ್ಷಾಂತರ ಕೃತಿಗಳ ಡಿಜಿಟಲೈಸೇಶನ್ ಪ್ರಕ್ರಿಯೆ ಸಕ್ರಿಯವಾಗಿ ನಡೆಯುತ್ತಿದೆ. ಈ ಮೂಲಕವೂ ಅಮೂಲ್ಯವಾದ ಸಾಹಿತ್ಯಕ ರಚನೆಗಳ ರಕ್ಷಣೆ ತಂತ್ರಜ್ಞಾನದಿಂದ ಸಾಧ್ಯವಾಗಿದೆ’ ಎಂದು ತಿಳಿಸಿದರು.