ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಜನರ ಕೊಳ್ಳುವ ಶಕ್ತಿ ಮತ್ತು ತಲಾ ಆದಾಯವೂ ಹೆಚ್ಚಿದೆ ಎಂದು ಜಾಗೃತ ಕರ್ನಾಟಕ ಸಂಚಾಲಕ ಡಾ.ಎಚ್.ವಿ.ವಾಸು ವಿಶ್ಲೇಷಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಉತ್ಸವ ಮತ್ತು ಕಾರ್ಯಾಗಾರದಲ್ಲಿ ವಿಚಾರ ಮಂಡಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಗೂ ಮುನ್ನ ರಾಜ್ಯ ಸರ್ಕಾರ ಕೇಂದ್ರಕ್ಕೆ ಶೇ.೬ರಷ್ಟು ಜಿಎಸ್‌ಟಿ ಸಂಗ್ರಹವಿದ್ದರೆ, ಗ್ಯಾರಂಟಿ ಯೋಜನೆಗಳ ಬಳಿಕ ಅದು ಶೇ.೭ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಆದಾಯ ಮೂಲದಲ್ಲೂ ಹೆಚ್ಚಳವಾಗಿದೆ ಎಂದು ಸಮರ್ಥಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ. ಸರ್ಕಾರಿ ನೌಕರರಿಗೆ ವೇತನ ಹೆಚ್ಚಿಸಲಾಗಿದೆ. ಆಶಾ, ಅಂಗನವಾಡಿ, ಅಕ್ಷರದಾಸೋಹ ಸೇರಿದಂತೆ ಇತರರ ವೇತನವನ್ನೂ ಹೆಚ್ಚಿಸಲಾಗಿದೆ. ಮಹಿಳೆಯರು ಆದಾಯವಿಲ್ಲದ ದುಡಿಮೆಗೆ ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ. ಇದು ಅವರ ಸಂವಿಧಾನಬದ್ಧ ಹಕ್ಕಾಗಿದ್ದು, ಇದನ್ನು ಸಂವಿಧಾನದಲ್ಲೂ ಹೇಳಿರುವುದಾಗಿ ಪ್ರತಿಪಾದಿಸಿದರು.ಗ್ಯಾರಂಟಿ ಯೋಜನೆಗಳೂ ಕೂಡ ಅಭಿವೃದ್ಧಿಯ ಸಂಕೇತವಾಗಿದೆ. ಎಲ್ಲ ವರ್ಗದ ಬಡವರಿಗೆ ಆರ್ಥಿಕ ಶಕ್ತಿಯನ್ನು ಕೊಡುವುದೂ ಕೂಡ ಅಭಿವೃದ್ಧಿಯೇ ಆಗಿದೆ. ಇದರಿಂದ ಜನರ ತಲಾದಾಯವನ್ನು ಹೆಚ್ಚಿಸುವುದರ ಜೊತೆಗೆ ಅವರ ಕೊಳ್ಳುವ ಶಕ್ತಿಯನ್ನೂ ಹೆಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಜಾರಿಯಾಗದೆ ವಿಶ್ವದ ಹಲವು ರಾಷ್ಟ್ರಗಳು ಕಳೆದ ೫೦ ವರ್ಷಗಳಿಂದಲೂ ಅಲ್ಲಿನ ಜನರಿಗೆ ಉಚಿತ ಸ್ಕೀಂಗಳನ್ನು ನೀಡುತ್ತಾ ಬಂದಿವೆ ಎಂದರು.
ಸಾಲದ ಮಿತಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ೧೧.೬೩ ಲಕ್ಷ ಕೋಟಿ ರು. ಸಾಲ ಮಾಡಿದ್ದರೆ ಕರ್ನಾಟಕ ೨೦೨೫-೨೬ನೇ ಸಾಲಿನಲ್ಲಿ ೧೧.೫೪ ಲಕ್ಷ ಕೋಟಿ ರು. ಸಾಲ ಮಾಡಿದೆ. ಆರಂಭದ ಎರಡು ವರ್ಷ ಗ್ಯಾರಂಟಿಗಳಿಗೆ ಹೆಚ್ಚು ಹಣ ತೊಡಗಿಸಿದ್ದರಿಂದ ಅಭಿವೃದ್ಧಿಗೆ ಕಾರ್ಯಗಳಿಗೆ ಹಣ ಕೊಡುವುದು ಕಷ್ಟವಾಗಿರಬಹುದು. ಆದರೆ, ಜನರನ್ನು ಆರ್ಥಿಕವಾಗಿ ಮೇಲೆತ್ತುವುದು ಕೂಡ ಅಭಿವೃದ್ಧಿ ಎಂಬುದನ್ನು ಮನಗಾಣಬೇಕು ಎಂದರು.೨೦೦೧ ರಿಂದ ೨೦೧೧ರವರೆಗೆ ದೇಶದಲ್ಲೇ ತಮಿಳುನಾಡು ಮಹಿಳೆಯರಿಗೆ ಉಚಿತ ಸ್ಕೀಂ ನೀಡುವುದನ್ನು ಮುಂದುವರೆಸಿಕೊಂಡು ಬಂದಿತ್ತು. ಅದಾದ ಬಳಿಕ ಮಹಿಳೆಯರ ಉದ್ಯೋಗಶೀಲತೆ ದರ ಶೇ.೪೧ಕ್ಕೆ ಹೆಚ್ಚಳವಾಗಿದೆ. ಜನರ ಕೈಗೆ ಹಣ ಸಿಕ್ಕರೆ ಮೇಲ್ಪಂಕ್ತಿಗೆ ಹೆಚ್ಚುತ್ತದೆ ಎನ್ನುವುದು ಇದರ ಸಂಕೇತವಾಗಿದೆ ಎಂದು ನುಡಿದರು.
ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಜನರಿಗೆ ಸಿಗಲಿದೆ. ಮೋದಿ ಅವರ ಬ್ರಿಡ್ಜಿಟಲ್ ನೇಷನ್ ಪುಸ್ತಕದಲ್ಲಿ ಉಚಿತ ಯೋಜನೆಗಳು ಮಹಿಳೆಯರ ಉದ್ಯೋಗಶೀಲತೆ ದರವನ್ನು ಹೆಚ್ಚಿಸಲಿದೆ ಎಂದು ಬರೆದಿದ್ದಾರೆ. ಹಾಗಾದರೆ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎನ್ನುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.;Resize=(128,128))
;Resize=(128,128))