ಇಪ್ಪತ್ತೈದು ಕವಿಗಳು. ಎಲ್ಲ ಕವಿಗಳಿಗೂ ಮುಂದಿನ ಸೀಟು ಬೇಕು. ಹೀಗಾಗಿ ಕವಿಗೋಷ್ಠಿಯನ್ನು ಮೂರು ಹಂತಗಳಲ್ಲಿ ಒಡೆಯಲಾಯಿತು. ತಲಾ ಎಂಟೆಂಟು ಕವಿಗಳು ಮುಂದಿನ ಕುರ್ಚಿಯಲ್ಲೇ ಕೂತು ಕವಿತೆಗಳನ್ನು ಓದಿದರು.
ಜೋಗಿ
ಚಿಕ್ಕದೇವರಾಜ ಒಡೆಯರ್ ವೇದಿಕೆ, ಮಂಡ್ಯ : ಇಪ್ಪತ್ತೈದು ಕವಿಗಳು. ಎಲ್ಲ ಕವಿಗಳಿಗೂ ಮುಂದಿನ ಸೀಟು ಬೇಕು. ಹೀಗಾಗಿ ಕವಿಗೋಷ್ಠಿಯನ್ನು ಮೂರು ಹಂತಗಳಲ್ಲಿ ಒಡೆಯಲಾಯಿತು. ತಲಾ ಎಂಟೆಂಟು ಕವಿಗಳು ಮುಂದಿನ ಕುರ್ಚಿಯಲ್ಲೇ ಕೂತು ಕವಿತೆಗಳನ್ನು ಓದಿದರು. ಎರಡು ಮಧ್ಯಂತರಗಳಲ್ಲಿ ಕವಿಗೋಷ್ಠಿಯೆಂಬ 135 ನಿಮಿಷಗಳ ಸುದೀರ್ಘ ಕಲಾಪ ಸಂಪನ್ನವಾಯಿತು.
ಕವಿತೆಯ ಆಶಯ, ಕವಿಯ ಹೊಣೆಗಾರಿಕೆ ಮತ್ತು ಕವಿಗಳ ಬದ್ಧತೆಯ ಕುರಿತು ಆಶಯ ನುಡಿಗಳನ್ನು ಆಡಿದ ರವಿ ಬೆಸಗರಹಳ್ಳಿ ಅದಕ್ಕೆ ಪೂರಕವಾಗಿ ಒಂದು ಕವಿತೆ ಓದಿದರು.
ಕವಿಗಳಿಗೆ ತಲಾ ಮೂರು ನಿಮಿಷಗಳ ಅವಕಾಶ ಇತ್ತು. ಅದನ್ನು ಕವಿಗಳು ಪ್ರಾಸ್ತಾವಿಕ ನುಡಿ, ಧನ್ಯವಾದ ಮತ್ತು ಕವಿತೆ ಓದಿಗೆ ಬಳಸಿಕೊಂಡರೆ, ನಿರೂಪಕರು ಒಂದು ನಿಮಿಷವನ್ನು ಕವಿತೆಯ ಸಾರವನ್ನು ಹೇಳುವುದಕ್ಕೆ ತೆಗೆದುಕೊಂಡರು.
ಗ್ರಾಮೀಣ ಪ್ರದೇಶದ ಕವಿಗಳು ವಸ್ತುವೈವಿಧ್ಯದ ಕವಿತೆಗಳೊಂದಿಗೆ ಹಾಜರಾಗಿದ್ದರು.
ಅಂಗಳದಲ್ಲಿ ಅರಳಿದ ಹೂವು
ಎದೆಯೊಳಗೆ ಅರಳುವುದು ಹೇಗೆ?
ಎಂದು ಪ್ರಶ್ನಿಸುತ್ತಾ ಶರೀಫ್ ಹಸಮಕಲ್ ಪಾರಿವಾಳದ ದಾರಿ ತಿಳಿಯುವಂತೆ ಮನುಕುಲಕ್ಕೆ ಕರೆ ನೀಡಿದರು. ಅಲ್ಲ ಮತ್ತು ಅಲ್ಲಮನನ್ನು ಒಂದಾಗಿ ಕಾಣುವ ಕಣ್ಣು ನಮ್ಮದಾಗಬೇಕು, ನಾವು ಗೋಡೆ ಒಡೆಯಬೇಕು ಅಂದರು.
ಸಂತೋಷ್ ಎಸ್. ಕರಹರಿ ಕರ್ನಾಟಕದ ಊರು, ಜಿಲ್ಲೆ, ತಿಂಡಿ ತೀರ್ಥಗಳನ್ನೆಲ್ಲ ಸೇರಿಸಿ ಕವಿತೆ ಹೆಣೆದಿದ್ದರು. ಹಾಮಾ ನಾಗಾರ್ಜುನ ಕನ್ನಡ ಕಾವ್ಯಗಳ ಶೀರ್ಷಿಕೆಗಳಿಂದಲೇ ಕವಿತೆ ಕಟ್ಟಿದರು.
ಅನೇಕರ ಕವಿತೆಗಳಲ್ಲಿ ಕನ್ನಡದ ಮಣ್ಣು, ನೀರು, ಗಾಳಿಗಳು ಸೇರಿಹೋಗಿದ್ದವು. ಕವಿತೆಯ ಕುರಿತೇ ಎರಡು ಕವಿತೆಗಳಿದ್ದವು, ಭೂಮಿತಾಯಿ, ದ್ರೌಪದಿ ಮುಂತಾದ ಹಳೆಯ ರೂಪಕಗಳು ಮತ್ತೆ ಮತ್ತೆ ಹಾಜರಾದವು. ಸೋಮಲಿಂಗಪ್ಪ ಚಿಕ್ಕಳ್ಳವರ ಉಪದೇಶ ಗೀತಾಮೃತ ಓದಿದರು. ಗಂಗಾಧರ ಪತ್ತಾರ ಹಂಪಿಯ ಮೇಲೆ ಬರೆದಿದ್ದ ಮಹಾಕಾವ್ಯದ ಕೆಲವು ಪುಟಗಳನ್ನು ಹಾಡಿದರು.
ರಮ್ಯ ಕೆ.ಜಿ. ಕವಿತೆಯಲ್ಲಿ ಕೇಜಿಗಟ್ಟಲೆ ದುಮ್ಮಾನ ಇತ್ತು.
ನಕ್ಕರೆ ದೂರು ಅತ್ತರೆ ಗುದ್ದು ತಿರಸ್ಕಾರದ ನೋಟದಿಂದ ತಿವಿದು ನಾಳೆಯ ಕನಸುಗಳಿಗೆ ನಿದ್ದೆಯಿಲ್ಲ ಎಂದು ಮಹಿಳೆಯ ಅಂತರಂಗದ ದುಗುಡವನ್ನು ಅವರು ತೆರೆದಿಟ್ಟರು. ಜಾತಿಮತದ ಗೋಡೆ ಒಡೆಯುವ, ಭೇದಭಾವ ಅಳಿಸುವ ಆಶಯಗಳೂ ಕವನದಲ್ಲಿ ವ್ಯಕ್ತವಾದವು.
ಕವಿತಾ ವಾಚನ ಎಂಬ ಕವಿತೆಯಲ್ಲಿ ರಮೇಶಬಾಬು ಕೇಳುಗರ ಮುಖದಲ್ಲಿ ನಿರ್ಲಿಪ್ತ ಭಾವನೆ ತೋರಿಕೆ ನಗೆಯಲ್ಲಿ ನಿರಾಸಕ್ತಿ ಪ್ರಕಟಣೆ ಎಂಬ ಸಾಲುಗಳು ಕವಿಗೋಷ್ಠಿಯ ಆಶಯಗೀತೆಯಂತೆ ಕೇಳಿಸಿದವು. ಗೋಷ್ಠಿಯಲ್ಲಿ ಕೊರಗ ಮತ್ತು ಕೊಂಕಣಿ ಭಾಷೆಯ ಕವಿತೆಗಳನ್ನೂ ಓದಲಾಯಿತು. ಅದಕ್ಕೂ ನಾಲ್ಕು ಚಪ್ಪಾಳೆಗಳು ಬಿದ್ದವು. ಒಬ್ಬ ಕವಿ ಬರಲಿಲ್ಲ ಎಂಬ ಘೋಷಣೆಗೆ ಅತಿಹೆಚ್ಚು ಚಪ್ಪಾಳೆ ಬಿತ್ತು.
ಕವಿಗೋಷ್ಠಿಯ ಸಭಿಕರು ಕಾವ್ಯೇತರ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಮಕ್ಕಳನ್ನು ಆಟವಾಡಿಸುತ್ತಾ, ನಿದ್ರಿಸುತ್ತಾ, ಫೋನು ಮಾಡುತ್ತಾ, ಶೂನ್ಯ ನೋಟದಲ್ಲಿ ಮುಂದಿನ ಗೋಷ್ಠಿಗೆ ಕಾಯುತ್ತಾ, ನಿರೂಪಕರು ಚಪ್ಪಾಳೆ ತಟ್ಟಿ ಎಂದಾಗ ಚಪ್ಪಾಳೆ ತಟ್ಟುತ್ತಾ ತಮ್ಮದೇ ಕಾವ್ಯಪ್ರಪಂಚದಲ್ಲಿ ಹಾಯಾಗಿದ್ದರು.