ಮಂಡ್ಯ: ಬೂದನೂರು ಉತ್ಸವದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ

KannadaprabhaNewsNetwork |  
Published : Feb 18, 2026, 01:30 AM IST
17ಕೆಎಂಎನ್‌ಡಿ-10ಬೂದನೂರು ಉತ್ಸವ ಪ್ರಯುಕ್ತ ಹೊಸಬೂದನೂರು ಗ್ರಾಮದಲ್ಲಿ ಶಾಸಕ ಪಿ. ರವಿಕುಮಾರ್ ನೇತೃತ್ವದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ವಿದ್ಯಾರ್ಥಿಗಳು. | Kannada Prabha

ಸಾರಾಂಶ

ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶಾಸಕ ಪಿ.ರವಿಕುಮಾರ್ ಗೌಡ ಅವರು ‘ಬೂದನೂರು ಉತ್ಸವ’ದಲ್ಲಿ ಹೊಸ ಕಾರ್ಯಕ್ರಮಕ್ಕೆ ನಾಂದಿಯಾಡಿದ್ದಾರೆ. ರಾಜ್ಯದಲ್ಲಿ 44 ಶಾಸಕರು ಪ್ರಥಮವಾಗಿ ಗೆದ್ದಿದ್ದು, ಈ ಪೈಕಿ ರವಿಕುಮಾರ್ ಅವರು ಕ್ರಿಯಾಶೀಲ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಶಾಸಕರಲ್ಲಿ ಪ್ರಥಮರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ನಡೆಯಲಿರುವ ‘ಬೂದನೂರು ಉತ್ಸವ’ದ ಪ್ರಯುಕ್ತ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಂಡ್ಯ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಗಮನಸೆಳೆದರು.

ಪ್ರಾಥಮಿಕ ಶಾಲಾ ಮಕ್ಕಳಿಗೆ ‘ನಿಸರ್ಗ ಚಿತ್ರಣ’, ಪ್ರೌಢಶಾಲಾ ಮಕ್ಕಳಿಗೆ ‘ಮಂಡ್ಯ ಜಿಲ್ಲೆಯ ಐತಿಹಾಸಿಕ ತಾಣಗಳು’ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ‘ಮಂಡ್ಯ ಜಿಲ್ಲೆಯ ಜಾನಪದ ಕಲೆಗಳು’ ಕುರಿತು ಚಿತ್ರಕಲೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಉಡುಗೊರೆ ನೀಡಲಾಯಿತು.

ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶಾಸಕ ಪಿ.ರವಿಕುಮಾರ್ ಗೌಡ ಅವರು ‘ಬೂದನೂರು ಉತ್ಸವ’ದಲ್ಲಿ ಹೊಸ ಕಾರ್ಯಕ್ರಮಕ್ಕೆ ನಾಂದಿಯಾಡಿದ್ದಾರೆ. ರಾಜ್ಯದಲ್ಲಿ 44 ಶಾಸಕರು ಪ್ರಥಮವಾಗಿ ಗೆದ್ದಿದ್ದು, ಈ ಪೈಕಿ ರವಿಕುಮಾರ್ ಅವರು ಕ್ರಿಯಾಶೀಲ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಶಾಸಕರಲ್ಲಿ ಪ್ರಥಮರಾಗಿದ್ದಾರೆ. ಸದಾ ಒಂದಿಲ್ಲೊಂದು ಜನಪರ ಕಾರ್ಯಕ್ರಮ ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಪಸರಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಗಣಿತ, ಇಂಗ್ಲಿಷ್‌ನಲ್ಲಿ ಹೆಚ್ಚು ಅನುತ್ತೀರ್ಣ:

ಮಂಡ್ಯ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 19 ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ಬಾರಿ 19,500 ಸಾವಿರ ಮಕ್ಕಳು ಪರೀಕ್ಷೆ ಬರೆದು ಶೇ.69ರಷ್ಟು ಫಲಿತಾಂಶ ಬಂದು ಮಂಡ್ಯ ಜಿಲ್ಲೆ 12ನೇ ಸ್ಥಾನ ಪಡೆದಿತ್ತು. 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೂ ಶೇ.72 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ 5 ವರ್ಷದಲ್ಲಿ 83 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಕೂತಿದ್ದು, 33 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಪೈಕಿ ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದರು.

ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆ ಬಹಳ ಹಿಂದುಳಿದಿದೆ. 5 ವರ್ಷದಲ್ಲಿ 70 ಸಾವಿರ ವಿದ್ಯಾರ್ಥಿಗಳು ಕುಳಿತಿದ್ದರು. ಈ ಪೈಕಿ 13,600 ಮಕ್ಕಳು ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲೇ ಅನುತ್ತೀರ್ಣರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಅವರು ಅತ್ಯಂತ ಕ್ರಿಯಾಶೀಲವಾಗಿ ವಿಶೇಷ ಗಮನಹರಿಸಿದ್ದು, ಬಿಇಒ, ಡಿಡಿಪಿಐ, ಡಿಡಿಪಿಯು ಮತ್ತು ಪೋಷಕರೊಂದಿಗೆ ಸಭೆ ನಡೆಸಿ ಈ ಬಾರಿ ಹೆಚ್ಚು ಫಲಿತಾಂಶ ಬರಲು ಕ್ರಮಕೈಗೊಂಡಿದ್ದಾರೆ ಎಂದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ವಿ.ಜೆ. ಶೋಭಾರಾಣಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ (ಶಿವಪ್ಪ), ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ತಾಪಂ ಇಒ ಲೋಕೇಶ್ವರ್, ತಹಸೀಲ್ದಾರ್ ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವ, ಸೌಭಾಗ್ಯ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಸಾತನೂರು ಸತೀಶ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆ, ಶಿಕ್ಷಣದಲ್ಲಿ ಮಳವಳ್ಳಿ ವಿಶಿಷ್ಟ ಛಾಪು: ದೊಡ್ಡಯ್ಯ
ಕಾಡಾನೆ ತುಳಿದು ಬಾಳೆ, ತೆಂಗು, ಅಡಿಕೆ ನಾಶ