ಮಂಡ್ಯ: ಬಲಗೈ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ

KannadaprabhaNewsNetwork |  
Published : Feb 25, 2026, 01:30 AM IST
೨೪ಕೆಎಂಎನ್‌ಡಿ-೫ಅನುಸೂಚಿತ ಜಾತಿಗಳ ವಿಧೇಯಕ ತಿರಸ್ಕರಿಸುವಂತೆ ಒತ್ತಾಯಿಸಿ ಬಲಗೈ ಒಕ್ಕೂಟದ ಸಮುದಾಯದವರು ಮಂಡ್ಯದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸ್ಥಾನಗಳಲ್ಲಿನ ನೇಮಕಾತಿ ಅಥವಾ ಆ ಹುದ್ದೆಗಳಿಗೆ ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯಲ್ಲಿ ಬಾಧಕವನ್ನುಂಟು ಮಾಡತಕ್ಕದ್ದಲ್ಲ ಎಂಬ ಅಂಶವು ಪ್ರಸ್ತುತ ರಾಜ್ಯಸರ್ಕಾರ ಸಿದ್ಧಪಡಿಸಿರುವ ವಿಧೇಯಕದಲ್ಲಿ ಸೇರ್ಪಡೆಯಾಗಿರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಅನುಮೋದನೆಗೆ ಸಲ್ಲಿಸಿರುವ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ (೨೦೨೫)ನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ವಿಧೇಯಕವನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.

ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸ್ಥಾನಗಳಲ್ಲಿನ ನೇಮಕಾತಿ ಅಥವಾ ಆ ಹುದ್ದೆಗಳಿಗೆ ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯಲ್ಲಿ ಬಾಧಕವನ್ನುಂಟು ಮಾಡತಕ್ಕದ್ದಲ್ಲ ಎಂಬ ಅಂಶವು ಪ್ರಸ್ತುತ ರಾಜ್ಯಸರ್ಕಾರ ಸಿದ್ಧಪಡಿಸಿರುವ ವಿಧೇಯಕದಲ್ಲಿ ಸೇರ್ಪಡೆಯಾಗಿರುವುದಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರು ಸಾಮಾನ್ಯವರ್ಗದಲ್ಲಿ ಆಯ್ಕೆಯಾದವರನ್ನು ಶೇ.೧೭ ಪ್ರಾತಿನಿಧ್ಯದಲ್ಲಿ ಸೇರಿಸಿ ಲೆಕ್ಕ ಹಾಕುವ ಸಾಧ್ಯತೆ ಇರುತ್ತದೆ. ಇದು ಪ.ಜಾತಿಯವರಿಗೆ ಪೂರಕವಾಗಿಲ್ಲದೆ ಇರುವುದರಿಂದ ತಿರಸ್ಕರಿಸುವುದು ಸೂಕ್ತ ಎಂದು ಒತ್ತಾಯಿಸಿದರು.

ಬಲಗೈ ಸಮುದಾಯಕ್ಕೆ ಸೇರಿದ ಜನಸಂಖ್ಯೆಯನ್ನು ವಿಭಜಿಸಿ ನ್ಯಾ. ನಾಗಮೋಹನ್‌ದಾಸ್‌ರವರು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದು, ವರದಿಯಲ್ಲಿ ಬಲಗೈ ಜಾತಿಯ ಜನಸಂಖ್ಯೆಯನ್ನು ೩೦,೦೮,೬೩೩ ಮಿತಿಗೊಳಿಸಿರುವುದು. ಬಲಗೈ ಜಾತಿಯ ಒಟ್ಟು ಜನಸಂಖ್ಯೆ ನಾಗಮೋಹನ್‌ದಾಸ್ ಆಯೋಗದ ಪ್ರಕಾರ ೩೬,೪೩,೬೬೦ ಇರುವಂತೆ ಮೀಸಲಾತಿ ಪ್ರಕರಣವನ್ನು ಪರಿಷ್ಕರಿಸಿದ ನಂತರ ಮಸೂದೆ ಸಿದ್ಧಪಡಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ ೬೩ ಜಾತಿಗಳು ಬಲಗೈ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರೆ ಸೌಲಭ್ಯ ಪಡೆಯಲು ಮಸೂದೆಯಲ್ಲಿ ಅವಕಾಶ ಕಲ್ಪಿಸದೇ ಇರುವುದು. ಪ್ರಸ್ತುತ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ೧೯ ಜಾತಿಗಳನ್ನು ಬಲಗೈ ಸಮುದಾಯವೆಂದು ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ೨೦೨೫ರ ನ. ೧೩ರಂದು ಸೌಲಭ್ಯ ಪಡೆಯಲು ಹೊರಡಿಸಿರುವ ಆದೇಶದಲ್ಲಿ ೬೩ ಜಾತಿಗಳನ್ನು ಬಲಗೈ ಸಮುದಾಯವೆಂದು ಗುರುತಿಸಿದ್ದು, ಈ ಸಮುದಾಯದ ಎಲ್ಲಾ ೬೩ ಜಾತಿಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಮಸೂದೆಯಲ್ಲಿ ಅವಕಾಶ ಕಲ್ಪಿಸಿರುವುದಿಲ್ಲ ಎಂದು ದೂರಿದರು.

ಒಳ ಮೀಸಲಾತಿ ಗೊಂದಲಗಳನ್ನು ಬಗೆಹರಿಸಿ ನ್ಯಾಯಾಲಯದ ಅಡೆತಡೆಗಳನ್ನು ನಿವಾರಣೆಯಾಗುವವರೆಗೆ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಪದ್ಧತಿಯನ್ನು ಮರು ಜಾರಿ ಮಾಡಲು ಸೂಚಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ ೨೦೨೫ನ್ನು ವಾಪಸ್ಸು ಕಳುಹಿಸಬೇಕು ಎಂದು ಒತ್ತಾಯಿಸಿದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮುಖಂಡರಾದ ಸುರೇಶ್‌ಕಂಠಿ, ನಿತ್ಯಾನಂದ, ಸಾತನೂರು ಜಯರಾಂ, ಪ್ರೊ.ಹುಲ್ಕೆರೆ ಮಹದೇವು, ದೀಪಕ್, ಶ್ರೀಧರ್, ಹರೀಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಐ ತಂತ್ರಜ್ಞಾನ ಬಳಸುವ ಕೌಶಲ್ಯ ಸಂಪಾದಿಸಿ: ಶಾಸಕ ಮಧು
ಅರಸಮ್ಮನ ಆಶೀರ್ವಾದ ಪಡೆದ ದಲಿತ ನವ ಜೋಡಿ