87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸೊಗಡಿನ ಆಹಾರ: ರಮೇಶ್ ಬಂಡಿಸಿದ್ದೇಗೌಡ

KannadaprabhaNewsNetwork | Updated : Aug 30 2024, 12:14 PM IST

ಸಾರಾಂಶ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮಂಡ್ಯ ಸೊಗಡಿನ ರುಚಿಯಾದ ಆಹಾರವನ್ನು ಉಣಬಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಆಹಾರ ಸಮಿತಿ ಅಧ್ಯಕ್ಷ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ಧೇಗೌಡ ತಿಳಿಸಿದರು.

 ಮಂಡ್ಯ :  ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮಂಡ್ಯ ಸೊಗಡಿನ ರುಚಿಯಾದ ಆಹಾರವನ್ನು ಉಣಬಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಆಹಾರ ಸಮಿತಿ ಅಧ್ಯಕ್ಷ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ಧೇಗೌಡ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಆಹಾರ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರು ದಿನಗಳ ಕಾಲ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ದೊರಕಬೇಕು. ಆಹಾರ ಬಿಸಿಯಾಗಿರುವಂತೆ ಬಡಿಸಬೇಕು ಎಂದರು.

ಸಮ್ಮೇಳನಕ್ಕೆ ರಾಗಿಮುದ್ದೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೆಲ್ಲದ ಮಿಠಾಯಿ, ಬೆಲ್ಲದ ಮೈಸೂರು ಪಾಕ್, ಕಜ್ಜಾಯ, ರವೆ ಹುಂಡೆ, ಚಪಾತಿ, ಶೇಂಗಾ ಚಟ್ನಿ, ಒಬ್ಬಟ್ಟು, ಪೊಂಗಲ್, ಪುಳಿಯೋಗರೆ, ಜೋಳದ ರೊಟ್ಟಿ, ಹುರುಳಿಕಾಳು ಬಸ್ಸಾರು, ಮೊಳಕೆ ಕಾಳು ಸಾರು, ಮೊಸಪ್ಪಿನ ಸಾರು, ಉಪ್ಸಾರು, ಮುಂತಾದ ವಿವಿಧ ರೀತಿಯ ತಿನಿಸುಗಳನ್ನು ಉಣಬಡಿಸುವ ಬಗ್ಗೆ ಚರ್ಚಿಸಲಾಯಿತು.

ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಿರುತ್ತದೆ. ಅದಕ್ಕಾಗಿ ನಿಂಬೆಹಣ್ಣಿನ ಪಾನಕ, ಕಬ್ಬಿನ ಹಾಲು, ಹಿರಳಿಕಾಯಿ ಜ್ಯೂಸ್, ಖರಬೂಜದ ಪಾನಕ ಸೇರಿದಂತೆ ಸೂಕ್ತವಾದ ಪಾನಕ ನೀಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಭಾಗದ ಜನರು ಹೆಚ್ಚು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕ ಆಹಾರ ಖಾದ್ಯವನ್ನು ಸಹ ನೀಡುವುದು ಉತ್ತಮ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಂ.ಬಾಬು, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಸದಸ್ಯ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಸಂಚಾಲಕರು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ಸೋಮಶೇಖರ್, ಗೌರವ ಕಾರ್ಯದರ್ಶಿ ವಿ. ಹರ್ಷ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Share this article