ಮಂಡ್ಯ ಮಣ್ಣು ಕಲಾವಿದರನ್ನು ಕೈಬಿಡುವುದಿಲ್ಲ: ಕೆ.ಎಸ್.ವಿಜಯ್‌ಆನಂದ್

KannadaprabhaNewsNetwork |  
Published : Jan 29, 2025, 01:33 AM ISTUpdated : Jan 29, 2025, 01:34 AM IST
೨೮ಕೆಎಂಎನ್‌ಡಿ-೭ಮಂಡ್ಯದ ಪಿಇಟಿ ಕ್ರೀಡಾಂಗಣದಲ್ಲಿ ನಡೆದ ಕೆವಿಎಸ್ ಕಪ್ ಟಿ-೨೦ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಉದ್ಘಾಟಿಸಿದರು. ಚಿತ್ರನಟರಾದ ಯೋಗೇಶ್, ರವಿಶಂಕರ್, ವಿಹಾನ್ ಇತರರಿದ್ದರು. | Kannada Prabha

ಸಾರಾಂಶ

ಜನತಾ ಶಿಕ್ಷಣ ಸಂಸ್ಥೆಗೆ ರೈತರು ೬೯ ಎಕರೆ ಜಮೀನನ್ನು ನೀಡಿದ್ದಾರೆ. ನಮ್ಮ ತಾತ ಕೆ.ವಿ.ಶಂಕರಗೌಡ ಮತ್ತು ನಮ್ಮ ತಂದೆ ಕೆ.ಎಸ್. ಸಚ್ಚಿದಾನಂದ ಅವರು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಸಂಸ್ಥೆಯಿಂದಲೇ ಸಂಕ್ರಾಂತಿ, ಹೊಸ ನೀರು ಸೇರಿದಂತೆ ಆರು ಸಿನಿಮಾಗಳನ್ನು ಮಾಡಿದ್ದೇವೆ. ನನಗೆ ಕಲೆಯಲ್ಲಿ ಯಾಕೋ ಆಸಕ್ತಿ ಬರಲಿಲ್ಲ. ಆದರೂ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರಿಂದಲೇ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದ ಮಣ್ಣು ಕಲಾವಿದರನ್ನು ಎಂದೆಂದಿಗೂ ಕೈ ಬಿಡುವುದಿಲ್ಲ. ಎಲ್ಲ ಕಲಾವಿದರಿಗೂ ಪ್ರೋತ್ಸಾಹ ನೀಡುವ ಕೆಲಸವನ್ನು ನಮ್ಮ ಹಿಂದಿನ ಮತ್ತು ಇಂದಿನ ನಾಯಕರೂ ಮಾಡುತ್ತಿದ್ದಾರೆ ಎಂದು ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.

ಪಿಇಟಿ, ಡ್ರೀಮ್ ಕ್ರಿಕೆಟ್ ಅಕಾಡೆಮಿ, ಪಿಇಟಿ ಕ್ರೀಡಾ ಸಮುಚ್ಚಯ ಇವರ ವತಿಯಿಂದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಸ್ಮರಣಾರ್ಥ ಪಿಇಟಿ ಆಹ್ವಾನಿತ ಟಿ-೨೦ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-೧ರ ಕೆವಿಎಸ್ ೨೦೨೫ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಕಲಾವಿದರು ನಾಟಕ ಪ್ರದರ್ಶನ ಮಾಡಿಯೇ ಕಟ್ಟಿದ್ದಾರೆ ಎಂದರು.

ಈ ಸಂಸ್ಥೆಗೆ ರೈತರು ೬೯ ಎಕರೆ ಜಮೀನನ್ನು ನೀಡಿದ್ದಾರೆ. ನಮ್ಮ ತಾತ ಕೆ.ವಿ.ಶಂಕರಗೌಡ ಮತ್ತು ನಮ್ಮ ತಂದೆ ಕೆ.ಎಸ್. ಸಚ್ಚಿದಾನಂದ ಅವರು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಸಂಸ್ಥೆಯಿಂದಲೇ ಸಂಕ್ರಾಂತಿ, ಹೊಸ ನೀರು ಸೇರಿದಂತೆ ಆರು ಸಿನಿಮಾಗಳನ್ನು ಮಾಡಿದ್ದೇವೆ. ನನಗೆ ಕಲೆಯಲ್ಲಿ ಯಾಕೋ ಆಸಕ್ತಿ ಬರಲಿಲ್ಲ. ಆದರೂ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರಿಂದಲೇ ಬಂದಿದೆ ಎಂದರು.

ಅದರೂ ನಮ್ಮೂರಿನವೇ ಆದ ರವಿಶಂಕರ್ ಅವರು ಸಿನಿಮಾ, ನಾಟಕಗಳಲ್ಲೂ ಸಹ ಉತ್ತಮ ಅಭಿನಯ ಮಾಡುತ್ತಿದ್ದಾರೆ. ಹಿಂದೆಯೂ ನಾವು ಕಲಾವಿದರಿಗೆ ಸಹಕಾರ ನೀಡುತ್ತಿದ್ದೆವು. ಈಗಲೂ ಸಹ ಅದೇ ರೀತಿ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.

ಕಲೆ ಮತ್ತು ಸಂಸ್ಕೃತಿಯಿಂದಲೇ ಕಟ್ಟಿರುವ ಈ ಸಂಸ್ಥೆಯಲ್ಲಿ ಹಿಂದೆ ಮಾಜಿ ಶಾಸಕರಾಗಿದ್ದ ದಿ.ಎಚ್.ಡಿ. ಚೌಡಯ್ಯ ಅವರು ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿದರು. ಅವರಿಂದಾಗಿ ಕ್ರೀಡೆಗೂ ಹೆಚ್ಚಿನ ಮನ್ನಣೆ ನೀಡುವಂತಾಗಿದೆ. ಇಲ್ಲಿ ಬ್ಯಾಡ್ಮಿಂಟನ್, ಈಜುಕೊಳ, ಟೇಬಲ್ ಟೆನ್ನಿಸ್, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಂಗಣಗಳು ಇವೆ. ಇನ್ನೂ ಹಲವು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲ ಟ್ರಸ್ಟಿಗಳ ಸಹಕಾರದಿಂದ ಮಾಡುತ್ತೇವೆ. ಜೊತೆಗೆ ಎಂದಿನಂತೆ ಕ್ರೀಡಾಕೂಟಗಳನ್ನೂ ಆಯೋಜಿಸುತ್ತೇವೆ. ಈಗ ಮಂಡ್ಯ ಡ್ರೀಮ್ ಕ್ರಿಕೆಟ್ ಅಕಾಡೆಮಿಯವರು ಇಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ. ಅವರಿಗೂ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.

ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಚಿತ್ರನಟ ರವಿಶಂಕರ್ ಮಾತನಾಡಿ, ನಮ್ಮ ಸೋದರ ಮಾವನವರಾದ ಕೆ.ಎಸ್. ಸಚ್ಚಿದಾನಂದ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಆದ್ದರಿಂದಲೇ ನಾನು ಇಂದು ಚಿತ್ರರಂಗದಲ್ಲಿದ್ದೇನೆ. ಅವರಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.

ಅವರಂತೆಯೇ ಕೆ.ಎಸ್.ವಿಜಯ್‌ಆನಂದ್ ಅವರೂ ಸಹ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದಾರೆ. ಸೀಸನ್-೧ ಇದ್ದದ್ದು ಮುಂದುವರಿಯುತ್ತೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಡ್ಯದ ಕ್ರಿಕೆಟ್ ತಂಡ ಆಟವಾಡುವ ರೀತಿಯಲ್ಲಿ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ ಎಂದರು.

ಟ್ರಸ್ಟ್ ನಿರ್ದೇಶಕ ಡಾ.ರಾಮಲಿಂಗಯ್ಯ, ಖ್ಯಾತ ಚಿತ್ರನಟರಾದ ಯೋಗೇಶ್, ಕೆಜಿಎಫ್ ಗರುಡರಾಮ್, ವಿವಾನ್ ಸೇರಿದಂತೆ ಸಂಗೀತ ನಿರ್ದೇಶಕರು ಹಾಗೂ ಪ್ರಾದೇಶಿಕ ಕ್ರಿಕೆಟ್ ಆಟಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ