ಮಂಡ್ಯ: ದೇವರ ಕಾಡಿನಲ್ಲಿ ಎಸ್‌ಪಿಬಿ ಸ್ವರ ಸಂಚಾರ

KannadaprabhaNewsNetwork |  
Published : Jun 29, 2026, 01:30 AM IST
೨೮ಕೆಎಂಎನ್‌ಡಿ-೪ಮಂಡ್ಯದ ಶಿವನಂಜಪ್ಪ ಉದ್ಯಾನವನದ ದೇವರಕಾಡುವಿನಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಹಿನ್ನಲೆ ಗಾಯಕಿ ಜೋಗಿ ಸುನೀತಾರಿಗೆ ವಿಶ್ವ ಸಂಗೀತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಮಂಡ್ಯ ಒಂದು ರೀತಿಯಲ್ಲಿ ನನಗೆ ತವರುಮನೆ. ನನ್ನ ಸೋದರತ್ತೆ ಮಂಡ್ಯದ ಸ್ವರ್ಣಸಂದ್ರದಲ್ಲಿದ್ದರು. ಸಕ್ಕರೆ ಕಾರ್ಖಾನೆಯಲ್ಲಿ ನಮ್ಮ ಮಾವ ಕೆಲಸ ಮಾಡುತ್ತಿದ್ದರು. ಬೇಸಿಗೆ ರಜೆಗೆ ನಾವೆಲ್ಲಾ ಮಂಡ್ಯಕ್ಕೆ ಬರುತ್ತಿದ್ದೆವು. ಹಾಗಾಗಿ ನಾನು ಬಹಳ ಪ್ರೀತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಪ್ರತಿಷ್ಠಿತ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ನಗರದ ಶಿವನಂಜಪ್ಪ ಉದ್ಯಾನವನದಲ್ಲಿರುವ ದೇವರ ಕಾಡಿನಲ್ಲಿ ಶನಿವಾರ ಸಂಜೆ ವಿಶ್ವ ಸಂಗೀತ ದಿನಾಚರಣೆ, ಎಸ್.ಪಿ.ಬಾಲಸುಬ್ರಮಣ್ಯಂ ಅವರ ಜನ್ಮದಿನದ ಅಂಗವಾಗಿ ‘ಗೀತ ಸಂಗೀತ ಎಸ್ಪಿಬಿ ಸ್ವರ ಸಂಚಾರ’ ಮತ್ತು ವಿಶ್ವ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ಮೂಡಿಬಂದಿತು.

ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆಗಾಯಕಿ ಜೋಗಿ ಸುನೀತಾ ಅವರಿಗೆ ವಿಶ್ವ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಜೋಗಿ ಸುನೀತಾ, ಎಲ್ಲೋ ಜೋಗಪ್ಪ ನಿನ್ನರಮನೆ, ತೂಗು ಮಂಚದಲ್ಲಿ ಕೂತು, ಹಾಡು ಹಳೆಯದಾದರೇನು ಸೇರಿದಂತೆ ಹಲವು ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಬಳಿಕ ಮಾತನಾಡಿದ ಜೋಗಿ ಸುನೀತಾ, ಮಂಡ್ಯ ಒಂದು ರೀತಿಯಲ್ಲಿ ನನಗೆ ತವರುಮನೆ. ನನ್ನ ಸೋದರತ್ತೆ ಮಂಡ್ಯದ ಸ್ವರ್ಣಸಂದ್ರದಲ್ಲಿದ್ದರು. ಸಕ್ಕರೆ ಕಾರ್ಖಾನೆಯಲ್ಲಿ ನಮ್ಮ ಮಾವ ಕೆಲಸ ಮಾಡುತ್ತಿದ್ದರು. ಬೇಸಿಗೆ ರಜೆಗೆ ನಾವೆಲ್ಲಾ ಮಂಡ್ಯಕ್ಕೆ ಬರುತ್ತಿದ್ದೆವು. ಹಾಗಾಗಿ ನಾನು ಬಹಳ ಪ್ರೀತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಲವಾರು ವೇದಿಕೆಗಳನ್ನು ಹಂಚಿಕೊಂಡಿದ್ದೇನೆ. ಅವರ ಆಶೀರ್ವಾದ ನಮಗೆ ಸಿಕ್ಕಿದ್ದೇ ನಮ್ಮ ಪುಣ್ಯ ಎಂದು ಭಾವುಕರಾಗಿ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ನೋವು ಮರೆಸಿ ನಲಿವು ಹೆಚ್ಚಿಸುವ ಅದಮ್ಯ ಶಕ್ತಿ ಸಂಗೀತಕ್ಕಿದೆ. ಇತ್ತೀಚನ ದಿನಗಳಲ್ಲಿನ ಒತ್ತಡದ ಬದುಕಿನ ನೋವಿಗೆ ಸಮಾಧಾನ ಮತ್ತು ಮನೋಚಿಕಿತ್ಸೆಗೆ ಸಂಗೀತ ದಿವೌಷಧವಾಗಿದೆ, ವೈದ್ಯಲೋಕ ಮತ್ತು ಆರೋಗ್ಯತಜ್ಞರ ಪ್ರಕಾರ ಸಂಗೀತ ಕೇಳುವುದು ಮತ್ತು ಕೇಳಿಸಿಕೊಳ್ಳುವುದು ಚಿಕಿತ್ಸೆಯಾಗಿದೆ ಎಂದು ನುಡಿದರು.

ದೇವರಕಾಡಿನಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ ನಡೆಸಿದರೂ ಬಳಗವು ನೆರವಾಗುತ್ತದೆ, ಅರೋಗ್ಯ ಹೆಚ್ಚಿಸಿಕೊಳ್ಳುವವರು ಅರ್ಧಗಂಟೆ ಇಲ್ಲಿಗೆ ಬಂದು ಕಳಿತು ಶುದ್ಧ ಆಮ್ಲಜನಕ ಪಡೆದು ೩೦ದಿನ ಆಯಸ್ಸು ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಕೆ. ಚಂದ್ರಶೇಖರ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ.ಭೈರಿ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಪ್ರತಿಭಾಂಜಲಿ ಡೇವಿಡ್ ಮತ್ತು ತಂಡ ಹಾಜರಿದ್ದರು.

ಆಲಯ ಮೃಗಾಲಯ, ಭೂಮಿ ಬಣ್ಣದ ಬುಗರಿ, ಆಕಾಶ ದೀಪವು ನೀನು ನಿನ್ನ ಕಂಡಾಗ, ಹೊಸ ಬಾಳಿಗೆ ನೀ ಜೊತೆಯಾದೆ, ನಗುವ ನಯನ, ಕೇಳದೆ ನಿಮಗೀತ, ಜೊತೆಯಾಗಿ ಹಿತವಾಗಿ ಸೇರಿದಂತೆ ಪ್ರತಿಭಾಂಜಲಿಯ ಡೇವಿಡ್, ಹಂಸರೇಖ, ಶಂಕರ್, ವಿಶ್ವಾಸ್, ಪ್ರಸನ್ನ, ಮೋಹನ್, ವರ್ಷಾ, ಡಾ.ರಿಷಿಕೇಶ್ ಸೇರಿದಂತೆ ಹಲವಾರು ಗಾಯಕರು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಮುಕ್ತ ದೇಶಕ್ಕೆ ಎಲ್ಲರ ಸಹಕಾರ ಅಗತ್ಯ
ಚುಟುಕು ಸಾಹಿತ್ಯ ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡುತ್ತದೆ