ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀಪಡುವಲ ಬಾಗಿಲು ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಭಾನುವಾರ ಕೆರಗೋಡು ಗ್ರಾಮದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗಣೇಶ ವಿಸರ್ಜನೆ ಮಾಡಲಾಯಿತು. ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ವಿಸರ್ಜಣೆ ಮಾಡಿರುವ ಕಾಂಗ್ರೆಸ್, ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದ ಬಿಜೆಪಿ-ಜೆಡಿಎಸ್‌ಗೆ ಬಲವಾದ ತಿರುಗೇಟು ನೀಡಿದೆ.ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ನಗರದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಮುಖಂಡರು-ಕಾರ್ಯಕರ್ತರೊಂದಿಗೆ ಬೈಕ್ ರ್‍ಯಾಲಿ ನಡೆಸಿದರು. ಬೈಕ್ ರ್‍ಯಾಲಿ ಪೇಟೆ ಬೀದಿ, ಹೊಳಲು ಸರ್ಕಲ್, ಚಿಕ್ಕಮಂಡ್ಯ, ಸಾತನೂರು, ಕೊಮ್ಮೇರಹಳ್ಳಿ, ಹೊನಗಾನಹಳ್ಳಿ, ಹುಲಿವಾನ, ಮರಿಲಿಂಗನದೊಡ್ಡಿ ಮಾರ್ಗವಾಗಿ ರ್ಯಾಲಿಯು ಕೆರಗೋಡು ಗ್ರಾಮವನ್ನು ತಲುಪಿತು.
ತೆರೆದ ವಾಹನದ ಮೂಲಕ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್, ಮುಖಂಡರಾದ ಕೀಲಾರ ರಾಧಾಕೃಷ್ಣ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ ಸೇರಿದಂತೆ ಹಲವರು ಕೆರಗೋಡಿಗೆ ತೆರಳಿದರು. ಶ್ರೀ ಆಂಜನೇಯ, ಜೈಶ್ರೀರಾಮ್ ಘೋಷಣೆ ಕೂಗುತ್ತಾ ಸಾಗಿದರು. ನಾವೆಲ್ಲಾ ಹಿಂದೂ-ನಾವೆಲ್ಲಾ ಒಂದು ಎಂದು ಕೂಗುತ್ತಾ ಮುನ್ನಡೆದರು.ಸಾಗರೋಪಾದಿಯಲ್ಲಿ ಹರಿದುಬಂದ ಜನ:
ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಕೆರಗೋಡು ಗ್ರಾಮಕ್ಕೆ ಸುತ್ತಮುತ್ತಲ ಗ್ರಾಮಗಳು ಹಾಗೂ ವಿವಿಧೆಡೆಯಿಂದ ಸಾಗರೋಪಾದಿಯಲ್ಲಿ ಜನರು ಹರಿದುಬಂದರು. ಕಣ್ಣು ಹಾಯಿಸಿದಷ್ಟು ದೂರಕ್ಕೆ ಜನರೇ ಕಾಣುತ್ತಿದ್ದರು. ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ ಗಣೇಶ ವಿಸರ್ಜನೆ ಸಮಯದಲ್ಲಿ ಶಾಸಕ ಬಸವರಾಜ ಪಾಟೀಲ್‌ಗೆ ಸೇರಿದ್ದಕ್ಕಿಂತ ಎರಡುಪಟ್ಟು ಜನರು ಸೇರುವುದರೊಂದಿಗೆ ಕಾಂಗ್ರೆಸ್ ಜನಶಕ್ತಿಯನ್ನು ಪ್ರದರ್ಶಿಸಿತು. ಆ ಮೂಲಕ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದದಿಂದ ಕುಂದಿದ್ದ ಕಾಂಗ್ರೆಸ್ ವರ್ಚಸ್ಸನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವಂತೆ ಕಂಡುಬರುತ್ತಿದೆ.ಕೆರಗೋಡಿನಲ್ಲಿ ಮಹಾಮೆರವಣಿಗೆ:
ಕೆರಗೋಡು ಗ್ರಾಮದ ಹಳೆಯ ಪೊಲೀಸ್ ಠಾಣೆ ಬಳಿ ಶ್ರೀಪಡುವಲ ಬಾಗಿಲು ಆಂಜನೇಯಸೇವಾ ಸಮಿತಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಇದೀಗ ೪೮ ದಿನಗಳ ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ನಂ.೧ ಡಿಜೆ, ಜಾನಪದ ಕಲಾತಂಡಗಳು, ವಾದ್ಯಗೋಷ್ಠಿಯೊಂದಿಗೆ ಮಹಾ ಮೆರವಣಿಗೆ ಆಯೋಜಿಸಲಾಗಿದೆ.ಮೆರವಣಿಗೆಯು ಹಳೆಯ ಪೊಲೀಸ್ ಠಾಣೆಯಿಂದ ಹೊರಟು ಪಿಡಬ್ಲ್ಯುಡಿ ರಸ್ತೆ ಮಾರ್ಗವಾಗಿ ಧ್ವಜಸ್ತಂಭದ ಬಳಿಗೆ ತಲುಪಿ. ನಂತರ ಅಂಚಹಳ್ಳಿ ರಸ್ತೆ, ತಳಮಳೆದೊಡ್ಡಿ ರಸ್ತೆ, ಸೊಸೈಟಿ ರಸ್ತೆ ಮಾರ್ಗವಾಗಿ ಶ್ರೀಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬಳಿಗೆ ಬಂದು ನಂತರ ಅಲ್ಲಿಂದ ಮುಂದೆ ಇರುವ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯುದ್ದಕ್ಕೂ ಜನಸಾಗರವೇ ನೆರೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಕಿಕ್ಕಿರಿದು ತುಂಬಿದ್ದವು. ಮೆರವಣಿಗೆ ತೆರಳುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಚಿವರು, ಶಾಸಕರಿದ್ದ ವಾಹನಕ್ಕೆ ಹನುಮಧ್ವಜವನ್ನು ಕಟ್ಟಲಾಗಿತ್ತು. ಆದರೆ. ಕಾಂಗ್ರೆಸ್ ನಾಯಕರು, ಮುಖಂಡರು ಕೇಸರಿ ಶಾಲನ್ನು ಧರಿಸಿದ ಕನ್ನಡ ಧ್ವಜದ ಶಾಲನ್ನು ಧರಿಸಿದ್ದರು. ಅಲ್ಲಲ್ಲಿ ಕಾಂಗ್ರೆಸ್ ಬಾವುಟಗಳು ಹಾರಾಡುತ್ತಿದ್ದುದು ಕಂಡುಬಂದಿತು.ಜೆಡಿಎಸ್-ಬಿಜೆಪಿಗೆ ಸಡ್ಡು:
ಜೆಡಿಎಸ್-ಬಿಜೆಪಿಗೆ ಸಡ್ಡು ಹೊಡೆಯುವಂತೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಯಿತು. ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಹಿಂದೂಗಳನ್ನು ಆಕರ್ಷಿಸಿದರು. ಕಿವಿಡಗಚ್ಚಿಕ್ಕುವಂತೆ ಕೇಳಿಬರುತ್ತಿದ್ದ ಡಿಜೆ ಸೌಂಡ್ ಕೆರಗೋಡಿನಾಚೆಗೂ ಮಾರ್ದನಿಸುತ್ತಿತ್ತು. ಹನುಮಧ್ವಜ ವಿವಾದದಿಂದ ಕಳಂಕ ಅಂಟಿಸಿಕೊಂಡಿದ್ದ ಕಾಂಗ್ರೆಸ್ ಅದ್ಧೂರಿಯಾಗಿ ಗಣೇಶ ವಿಸರ್ಜನೆಯೊಂದಿಗೆ ಆ ಕಳಂಕವನ್ನು ತೊಳೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದಂತೆ ಕಂಡುಬರುತ್ತಿದೆ.ಮಹಿಳಾ ಕಾರ್ಯಕರ್ತೆಯರು ಭಾಗಿ:
ಮಂಡ್ಯದಿಂದ ಆರಂಭವಾದ ಬೈಕ್ ಜಾಥಾ ಹಾಗೂ ಗಣೇಶ ವಿಸರ್ಜನೆಯ ಮಹಾಮೆರವಣಿಗೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧ್ಯಕ್ಷೆ ಎಚ್.ಬಿ.ಶುಭದಾಯಿನಿ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತೆಯರು ಸ್ಕೂಟರ್‌ಗಳಲ್ಲಿ ಕೆರಗೋಡಿಗೆ ತೆರಳಿದ್ದರು. ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆಆಗಮಿಸುವಂತೆ ವಿವಿಧ ಗ್ರಾಮಗಳಿಗೆ ತೆರಳಿ ಕರಪತ್ರ ಹಂಚಿ ಪ್ರಚಾರ ನಡೆಸಿದ್ದರು.