ಮಂಡ್ಯ ವಿವಿ ವಿಲೀನ: ಮುಖಂಡರಿಂದ ಹೋರಾಟದ ಎಚ್ಚರಿಕೆ

KannadaprabhaNewsNetwork | Published : Feb 13, 2025 12:48 AM

ಸಾರಾಂಶ

ಶೈಕ್ಷಣಿಕವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಮಂಡ್ಯ ವಿಶ್ವವಿದ್ಯಾಲಯವನ್ನು ಮತ್ತೆ ಮೈಸೂರು ವಿಶ್ವ ವಿದ್ಯಾಲಯದೊಂದಿಗೆ ವಿಲೀನಗೊಳಿಸಲು ನಡೆಸುತ್ತಿರುವ ಸರ್ಕಾರದ ಪ್ರಯತ್ನವನ್ನು ವಿವಿಧ ಸಂಘ-ಸಂಸ್ಧೆಗಳ ಮುಖಂಡರು ತೀವ್ರವಾಗಿ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಶೈಕ್ಷಣಿಕವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಮಂಡ್ಯ ವಿಶ್ವವಿದ್ಯಾಲಯವನ್ನು ಮತ್ತೆ ಮೈಸೂರು ವಿಶ್ವ ವಿದ್ಯಾಲಯದೊಂದಿಗೆ ವಿಲೀನಗೊಳಿಸಲು ನಡೆಸುತ್ತಿರುವ ಸರ್ಕಾರದ ಪ್ರಯತ್ನವನ್ನು ವಿವಿಧ ಸಂಘ-ಸಂಸ್ಧೆಗಳ ಮುಖಂಡರು ತೀವ್ರವಾಗಿ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ಪ್ರೊ.ಜಯಪ್ರಕಾಶಗೌಡ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ರೈತ ನಾಯಕಿ ಸುನಂದಾ ಜಯರಾಂ, ಎಸ್.ಬಿ. ಎಜುಕೇಷನ್ ಟ್ರಸ್ಟ್‌ನ ಮೀರಾ ಶಿವಲಿಂಗಯ್ಯ ಇತರರು ಮಂಡ್ಯ ವಿವಿಯನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡುವ ಪ್ರಕ್ರಿಯೆಯನ್ನು ವಿರೋಧಿಸಿದರು.

ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ರಾಮಲಿಂಗಯ್ಯ, ಪ್ರೊ.ಹುಲ್ಕೆಕೆರೆ ಮಹದೇವು, ಪ್ರೊ.ಅನಿಲ್‌ಕುಮಾರ್, ಬಿ. ಬೋರಯ್ಯ, ಮಂಜುನಾಥ್, ಕಾರಸವಾಡಿ ಮಹದೇವು, ಇಂಡುವಾಳು ಚಂದ್ರಶೇಖರ್, ಎ.ಸಿ.ರಮೇಶ್, ಕೆ.ಟಿ.ಹನುಮಂತು, ಚಿದಂಬರ್, ಡಿ.ಪಿ. ಸ್ವಾಮಿ, ಮುದ್ದೇಗೌಡ ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು. ಯಾರು ಯಾರು ಏನೆಂದರು.?

ವಿಶ್ವ ವಿದ್ಯಾಲಯದ ಧನ ಸಹಾಯದ ಆಯೋಗದ ಅಭಿಪ್ರಾಯದಂತೆ ಜಿಲ್ಲೆಗೊಂದು ವಿವಿ ಸ್ಥಾಪನೆ ಹಾಗೂ ಸ್ನಾತಕೋತ್ತರ ಪದವಿಯ ಪ್ರಗತಿಗಾಗಿ ಪ್ರತಿ ಜಿಲ್ಲೆಯಲ್ಲೂ ವಿವಿಗಳನ್ನು ತೆರೆಯಬೇಕೆಂಬ ನೀತಿಗನುಸಾರ ಮಂಡ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ನಾಲ್ಕು ವರ್ಷ ಓರ್ವ ಕುಲಪತಿ ಆಡಳಿತ ನಡೆಸಿದ್ದಾರೆ. ಮಂಡ್ಯ ವಿವಿಯನ್ನು ಮುಚ್ಚಿ ಮತ್ತೆ ಮೈಸೂರು ವಿವಿಗೆ ವಿಲೀನ ಮಾಡುವ ಸುದ್ದಿ ಆಘಾತ ತಂದಿದೆ.

- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ೨೦೧೯ರಲ್ಲಿ ಪ್ರಾರಂಭವಾದ ಮಂಡ್ಯ ವಿವಿಗೆ ರೂಸೋ ಸಂಸ್ಥೆ ೫೫ ಕೋಟಿ ಅನುದಾನ ನೀಡಿದೆ. ಅದರಲ್ಲಿ ಆಡಳಿತ, ವಾಣಿಜ್ಯ ಸೇರಿದಂತೆ ಹಲವು ಸ್ನಾತಕೋತ್ತರ ಕಟ್ಟಡಗಳನ್ನು ನಿರ್ಮಿಸಿ ಕಾರ್ಯ ನಿರ್ವಹಿಸುತ್ತಿದೆ. ೪೫೦೦ ಮಂದಿ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೂ ಸರ್ಕಾರ ಇದನ್ನು ವಿಲೀನಗೊಳಿಸುವಂತಹ ಚಿಂತನೆ ಮಾಡಿರುವುದಾದರೂ ಏಕೆ. ಶೈಕ್ಷಣಿಕವಾಗಿ ಶಕ್ತಿ ತುಂಬಿ ವಿಶ್ವವಿದ್ಯಾಲಯವನ್ನು ಬಲವರ್ಧನೆಗೊಳಿಸುವುದನ್ನು ಬಿಟ್ಟು ಆರಂಭದಲ್ಲೇ ಚಿವುಟುವಂತಹ ನೀತಿಯನ್ನು ಸರ್ಕಾರ ಪಾಲಿಸುತ್ತಿದೆ.

- ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸದಸ್ಯರು, ವಿಧಾನಪರಿಷತ್ತು

ಮಂಡ್ಯ ವಿವಿಯನ್ನು ವಿಲೀನ ಮಾಡುವಂತಹ ನಿರ್ಧಾರ ಸರಿಯಲ್ಲ, ಮೊದಲು ಜಿಲ್ಲೆಯ ಮುಖಂಡರೊಂದಿಗೆ ಸಂವಾದ ನಡೆಸಿ, ಜಿಲ್ಲೆಗೆ ಆಗಬೇಕಿರುವ ಕಾರ್ಯಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಿ. ಅದು ಬಿಟ್ಟು ಜಿಲ್ಲೆಯ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡಿದ್ದೇ ಆದಲ್ಲಿ ನಾವೂ ಸಹ ಕೈಕಟ್ಟಿ ಕೂರುವವರಲ್ಲ. ಕೆಆರ್‌ಎಸ್ ಬಳಿ ಜನರಿಗೆ ಬೇಡದ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಇರುವ ಆಸಕ್ತಿ ಮಂಡ್ಯ ವಿಶ್ವವಿದ್ಯಾಲಯದ ಉಳಿವಿಗೆ ಏಕಿಲ್ಲ.

- ಸುನಂದಾ ಜಯರಾಂ, ರೈತನಾಯಕಿ

ನಮ್ಮ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಅಗತ್ಯವಾಗಿ ಆಗಬೇಕಾಗಿರುವ ಪ್ರತಿಯೊಂದು ಕೆಲಸಗಳಿಗೂ ಮೈಸೂರಿಗೇ ಹೋಗಬೇಕಿತ್ತು. ಆದರೆ, ಮಂಡ್ಯ ವಿವಿ ಆದ ನಂತರ ನಾವು ಎಲ್ಲದ್ದಕ್ಕೂ ಮಂಡ್ಯ ವಿವಿಯನ್ನೇ ಅವಲಂಭಿಸಿದ್ದೇವೆ. ಆದರೆ, ಇದೀಗ ವಿಲೀನದ ಮಾತಿನಿಂದ ನಮಗೂ ಆಘಾತವಾಗಿದೆ. ಇಂತಹ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಜಿಲ್ಲೆಯ ಜನಪ್ರತಿನಿಧಿಗಳೂ ಸಹ ಈ ಬಗ್ಗೆ ಚಿಂತನೆ ನಡೆಸಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.

- ಮೀರಾ ಶಿವಲಿಂಗಯ್ಯ, ಕಾರ್ಯದರ್ಶಿ, ಎಸ್.ಬಿ. ಎಜುಕೇಷನ್ ಟ್ರಸ್ಟ್

Share this article