ಕನ್ನಡಪ್ರಭ ವಾರ್ತೆ ಮಂಡ್ಯ
ಮತದಾನ ಮುಗಿಯುತ್ತಿದ್ದಂತೆ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ-ಮಸ್ಟರಿಂಗ್ ಕಾರ್ಯ ನಡೆಸಿ, ಮತದಾನಕ್ಕೆ ಬಳಸಿದ ಎಲ್ಲ ವಿದ್ಯುನ್ಮಾನ ಮತಯಂತ್ರ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಹಾಗೂ ಎಲ್ಲ ಶಾಸನಬದ್ಧ ದಾಖಲೆಗಳನ್ನು ಜಿಪಿಎಸ್ ಅಳವಡಿಸಿದ ವಾಹನದ ಮೂಲಕ ಸೂಕ್ತ ಪೊಲೀಸ್ ಭದ್ರತೆಯೊಡನೆ ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ಕಾಲೇಜಿಗೆ ತಂದು ಇಡಲಾಗಿದೆ.
ಮತದಾನದ ಅವಧಿ ಸಂಜೆ ೬ ಗಂಟೆಗೆ ಮುಗಿದರೂ ಅಷ್ಟರೊಳಗೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ಶುಕ್ರವಾರ ರಾತ್ರಿ ೭.೩೦ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅಂತಹ ಮತಗಟ್ಟೆಗಳು ಹಾಗೂ ದೂರದ ಪ್ರದೇಶಗಳಿಂದ ಮತಯಂತ್ರಗಳು ನಗರಕ್ಕೆ ಬರುವುದು ತಡವಾಗಿತ್ತು. ರಾತ್ರಿಯಿಡೀ ಮತಯಂತ್ರಗಳ ವಾಹನಗಳು ಪೊಲೀಸ್ ಭದ್ರತೆಯಲ್ಲಿ ಬರುತ್ತಲೇ ಇದ್ದವು.ಶನಿವಾರ ಬೆಳಿಗ್ಗೆ ೮ ಗಂಟೆಗೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಿಂದ ಮತಯಂತ್ರ ಬಂದಿದೆ. ಹೀಗಾಗಿ ರಾತ್ರಿಯಿಡೀ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್.ಯತೀಶ್ ಹಾಗೂ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಎಚ್ಚರವಿದ್ದು, ಕರ್ತವ್ಯ ನಿರ್ವಹಿಸುವ ಮೂಲಕ ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೊಠಡಿ ಸೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮಂಡ್ಯ ವಿವಿಯ ಕಾಮರ್ಸ್ ಬ್ಲಾಕ್‌ನ ೧೮ ಕೊಠಡಿಗಳಲ್ಲಿ ಸ್ಥಾಪಿಸಿರುವ ಸ್ಟಾಂಗ್‌ರೂಂಗಳಲ್ಲಿ ಎಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨ರಂತೆ ಸ್ಟಾಂಗ್‌ರೂಂಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಅಂಚೆ ಮತಗಳು ಹಾಗೂ ಶಾಸನಬದ್ಧ ದಾಖಲೆಗಳಿಗಾಗಿ ತಲಾ ಒಂದೊಂದು ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗಿದೆ.
ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಲು ಮತ ಎಣಿಕೆ ದಿನವಾದ ಜೂ.೪ರವರೆಗೆ ದಿನದ ೨೪ ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಯಂತ್ರಗಳನ್ನು ಸಂಗ್ರಹ ಮಾಡಿಟ್ಟಿರುವ ಸರ್ಕಾರಿ ಮಹಾವಿದ್ಯಾಲಯಕ್ಕೆ ೨೪ ಗಂಟೆಗಳ ಭದ್ರತೆ ಒದಗಿಸಲಾಗಿದೆ.
ಸ್ಟ್ರಾಂಗ್ ರೂಂನಲ್ಲಿ ಮತ ಯಂತ್ರ ಭದ್ರ
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ಸೀಲ್ ಮಾಡಿದ ಸ್ಟ್ರಾಂಗ್ ರೂಂಗಳನ್ನು ಪೊಲೀಸ್ ಇಲಾಖೆ ಸುಪರ್ದಿಗೆ ಪಡೆಯಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಟ್ರಾಂಗ್‌ರೂಂಗಳಿಗೆ ಭದ್ರತೆ ಒದಗಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨ರಂತೆ ಸ್ಟ್ರಾಂಗ್ ರೂಂಗಳನ್ನು ಮಾಡಲಾಗಿದೆ. ಇದರೊಂದಿಗೆ ಅಂಚೆಮತಗಳು, ಶಾಸನಬದ್ಧ ದಾಖಲೆಗಳಿಗಾಗಿ ಒಂದೊಂದು ಹೆಚ್ಚುವರಿ ಸ್ಟಾಂಗ್‌ರೂಂಗಳನ್ನು ಸ್ಥಾಪಿಸಲಾಗಿದೆ.