ವಿಶೇಷ ವರದಿ
ನಂದೀಶ್ ಅವರಂತಹ ಗುರುಗಳು ಎಲ್ಲೆಡೆ ಲಭಿಸಿದರೆ, ಸ್ಮಿತಾಳಂತ ಅದೆಷ್ಟು ಬಡ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುತ್ತಿತ್ತು.....
ಇದು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದು, ಉಪ್ಪಿನಂಗಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಸಾಧನೆಯೊಂದಿಗೆ ಪಡೆದ ಯುವತಿಯ ಮಾತು. ಪ್ರಸಕ್ತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕ ಪಡೆದು ಉತ್ತೀರ್ಣಳಾದ ಸ್ಮಿತಾ ಅವರ ಸಾಧನೆಯ ಉದ್ಗಾರ ಇದು.ನಾನು ತೀರಾ ಬಡ ಕುಟುಂಬದವಳು. ಕಲಿಯುವುದಕ್ಕೆ ಆಸಕ್ತಿ ಇತ್ತು. ಯಾವುದನ್ನು ಕಲಿಯಬೇಕೆನ್ನುವುದರ ಬಗ್ಗೆ ಅರಿವಿರಲಿಲ್ಲ. ನನ್ನ ಕಲಿಕಾಸಕ್ತಿಯನ್ನು ಗುರುತಿಸಿ, ಕಲಿಕೆಗೆ ದಿಕ್ಕುದೆಸೆಯನ್ನು ಒದಗಿಸಿ, ವಿದ್ಯಾರ್ಥಿವೇತನದ ಬಗ್ಗೆಯೂ ನಾನು ಗಮನ ಹರಿಸುವಂತೆ ಮಾಡಿ, ನನ್ನಂತಹ ಬಡ ವಿದ್ಯಾರ್ಥಿನಿಯೋರ್ವಳು ೬ ಚಿನ್ನದ ಪದಕದೊಂದಿಗೆ ಸ್ನಾತಕೋತರ ಪದವಿ ಪರೀಕ್ಷೆಯನ್ನು ಉತ್ತೀರ್ಣಳಾಗಿದ್ದೇನೆ ಎಂದರೆ ಅದಕ್ಕೆ ನನ್ನ ಪದವಿ ಶಿಕ್ಷಣದ ಪ್ರಾಧ್ಯಾಪಕ ನಂದೀಶ್ ವೈ.ಡಿ. ಅವರೇ ಕಾರಣ ಎಂದು ಸ್ಮಿತಾ ಹೇಳಿದರು.
ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ಕಾಲೇಜಿಗೆ ಆಗಮಿಸಿದ ಸ್ಮಿತಾಳ ಕಲಿಕಾಸಕ್ತಿಯನ್ನು ಕಂಡ ಅವರು, ಸಮಾಜ ವಿಜ್ಞಾನದತ್ತ ಗಮನ ಹರಿಸಲು ಸಲಹೆ ನೀಡಿದರು. ಮನೆಯಲ್ಲಿನ ಬಡತನ ಆಕೆಯ ಕಲಿಕೆಗೆ ಅಡಚಣೆಯಾಗಬಾರದೆಂದು ಯಾವೆಲ್ಲ ವಿದ್ಯಾರ್ಥಿವೇತನಗಳು ಇದೆಯೋ ಅದಕ್ಕೆಲ್ಲ ಅರ್ಜಿಸಲ್ಲಿಸಲು, ಪರೀಕ್ಷೆ ಬರೆಯಲು ಉತ್ತೇಜನ ನೀಡಿದರು. ಪ್ರಾಧ್ಯಾಪಕರಿಂದ ದೊರೆತ ಬೆಂಬಲವನ್ನು ಸದ್ಬಳಕೆ ಮಾಡಿಕೊಂಡ ಸ್ಮಿತಾ, ಬಿಎಸ್‌ಡಬ್ಲ್ಯು ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿ ಊರಿಗೆ ಗೌರವ ತಂದಿತ್ತರು.
ಆ ವರದಿಯ ಸಂದರ್ಭದಲ್ಲಿ ಆಕೆ ನೀಡಿದ ಹೇಳಿಕೆಯೇ ಗುರುವಿನ ಸ್ಥಾನದಲ್ಲಿದ್ದ ನಂದೀಶ್ ವೈ.ಡಿ. ಅವರ ನೈಜ ಗುರು ತತ್ವವನ್ನು ಅನಾವರಣಗೊಳಿಸಿತು.
ಅಂದ ಹಾಗೆ ನಂದೀಶ್ ಅವರು ತಮ್ಮ ಕಾಲೇಜು ವಿದ್ಯಾರ್ಥಿಗಳ ನಟನಾ ಸಾಮರ್ಥ್ಯವನ್ನು ಕೂಡ ಹೊರ ಜಗತ್ತಿಗೆ ಅನಾವರಣಗೊಳಿಸಿದ್ದು, ಜಿಲ್ಲಾಡಳಿತ ಕಲ್ಪಿಸಿದ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಟಿಸಿದ ಕಿರು ಸಾಕ್ಷ್ಯ ಚಿತ್ರವೊಂದು ಸ್ಪರ್ಧಾ ಕಣದಲ್ಲಿ ಪ್ರಥಮ ಸ್ಥಾನ ಪಡೆಯಲು ಇವರ ನಿರ್ದೆಶನವೇ ಕಾರಣವಾಗಿತ್ತು.