ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿಗೆ ಸಮೀಪದ ಅಂಕನಹಳ್ಳಿ ಶ್ರೀತಪೋವನ ಕ್ಷೇತ್ರ ಮನೆಹಳ್ಳಿಮಠದ ಆವರಣದಲ್ಲಿ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ‘ಜನ ಜಾಗೃತಿ-ಸಾಧನೆ-ಸಮ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಜನ್ಮ, ಭಗವಂತನಲ್ಲಿ ಆಸಕ್ತಿ ಹಾಗೂ ಮಾರ್ಗದರ್ಶಕ ಗುರುವಿನ ದರ್ಶನ –ಈ ಮೂರು ಅತ್ಯಂತ ಅವಶ್ಯಕತೆಗಳು ದೊರೆತಾಗ ದೈವ ಸಾಕ್ಷಾತ್ಕಾರ ಆಗಲು ಸಾಧ್ಯ ಹಾಗೂ ಜನ್ಮ ಸಾರ್ಥಕವಾಗುತ್ತದೆ. ಪರಿಶ್ರಮದಿಂದ ಸಿಕ್ಕ ಭಾಗ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಮನಸ್ಸಿನ ಮೂಲ ಹಾಗೂ ಆತ್ಮದ ಮೂಲ ಪರಮಾತ್ಮ. ನಿತ್ಯ ಭಗವಂತನ ಸ್ಮರಣೆ ಮಾಡುವುದರಿಂದ ಮರುಜನ್ಮ ಉಂಟಾಗುತ್ತದೆ. ಸಿಹಿ ನೀರು ಉಪ್ಪಿನ ಮೂಲ ಸಮುದ್ರ ಸೇರುವಂತೆ ನಿತ್ಯ ಭಗವಂತನ ಸ್ಮರಣೆ ಮಾಡಿದರೆ ಜನ್ಮ ಸಾರ್ಥ್ಯಕ್ಯ ಪಡೆಯುತ್ತದೆ ಎಂದು ಹೇಳಿದರು.ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ, ಕ್ರಿ.ಶ.12 ನೇ ಶತಮಾನದ ಬಸವಣ್ಣ ಸರ್ವ ಸಮಾನತೆ ತಂದುಕೊಟ್ಟ ಕ್ರಾಂತಿಕಾರಿ. ಸಾಂಸ್ಕೃತಿಕ ನಾಯಕರು. ದಕ್ಷಿಣಕ್ಕೆ ಬಂದ ಶೈವ ಪಂಥದ ಬಸವಾದಿ ಶರಣರು ನಡೆದಾಡಿದ ಪುಣ್ಯದ ಭೂಮಿ ಕರ್ನಾಟಕ. ಬಸವಾದಿ ಶಿವಶರಣರು ಅರಿಷಡ್ವರ್ಗ ದಾಟಿ, ಪಂಚೇಂದ್ರಿಯಗಳನ್ನು ದಾಟಿದ ಸಾಂಸ್ಕೃತಿಕ ಜಗತ್ತಿಗೆ ಕೊಡುಗೆ ನೀಡಿದವರು. ಅಕ್ಷರ ದಾಸೋಹ, ಅನ್ನ ದಾಸೋಹ ಆಶ್ರಯ ಕೊಟ್ಟಂಥ ನಡೆದಾಡುವ ದೈವ ಶಿವಕುಮಾರಸ್ವಾಮಿಯವರ ಪುಣ್ಯ ಭೂಮಿ ಕರ್ನಾಟಕ ಭಾರತ ದೇಶಕ್ಕೆ ಮಾದರಿ ಎಂದರು.
ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಜೀವನದಲ್ಲಿ ಸಾಧನೆ ಮಾಡಬಹುದೆಂಬುದಕ್ಕೆ ಮನೇಹಳ್ಳಿ ಮಠದ ಅಭಿವೃದ್ಧಿಯೇ ಸಾಕ್ಷಿ. ಪವಿತ್ರ ಕ್ಷೇತ್ರವಾಗಿರುವ ಮಠ ಎಲ್ಲಾ ಭಕ್ತರಿಗೆ ಸಂಸ್ಕಾರ, ಜ್ಞಾನ, ಭಕ್ತಿ ನೀಡುವುದರ ಜತೆಗೆ ಗೋಶಾಲೆ ನಿರ್ಮಾಣದ ಜತೆಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದೆ. ಶರಣರ ಚಿಂತನೆ, ವಚನಗಳು ಜನಸಾಮಾನ್ಯರಿಗೆ ದಾರಿದೀಪವಾಗಿವೆ ಎಂದರು.
ಜಾತ್ರಾ ಮಹೋತ್ಸವದ ಕಾರ್ಯಕ್ರಮ ಆಯೋಜಕ ಹಾಗೂ ಹಿರಿಯ ಪತ್ರಕರ್ತ ಎಸ್.ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಠದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ದಾಸೋಹದ ಜತೆ ಜ್ಞಾನ ದಾಸೋಹ ಸಹ ನಡೆಯುತ್ತಿದೆ. ಹಾದಿ ತಪ್ಪುತ್ತಿರುವ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜನ ಜಾಗೃತಿ, ಸಾಧನೆ, ಸಮ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀತಪೋವನ ಕ್ಷೇತ್ರ ಮನೇಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಪತ್ರಕರ್ತ ಎಸ್. ಮಹೇಶ್ ಇತರರು ಉಪಸ್ಥಿತರಿದ್ದರು. ಲೇಖಕಿ ಗೀತಾಂಜಲಿ ಹಾಗೂ ಮುಖ್ಯಶಿಕ್ಷಕಿ ಪ್ರೇಮಾ ಸಾಧಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.