ಮನೇಲಿ ಹಬ್ಬದ ವಾತಾವರಣ : ಕರ್ನಲ್‌ ಸೋಫಿಯಾ ಮಾವ

KannadaprabhaNewsNetwork |  
Published : May 09, 2025, 12:31 AM ISTUpdated : May 09, 2025, 01:01 PM IST
ಕರ್ನಲ್‌ ಸೋಫಿಯಾ ಮಾವ | Kannada Prabha

ಸಾರಾಂಶ

ನಮ್ಮ ಸೊಸೆ ಸೋಫಿಯಾ ಧೈರ್ಯ ನೋಡಿ ನಮಗೆ ಹೆಮ್ಮೆ ಮೂಡಿತು. ನಮ್ಮ ಮನೆಯಲ್ಲಿ ಹಬ್ಬದ ವಾತಾವರಣವಿದೆ...! ಆಪರೇಷನ್‌ ಸಿಂದೂರ ಕುರಿತು ಪ್ರಪಂಚಕ್ಕೆ ಎಳೆಎಳೆಯಾಗಿ ಮಾಹಿತಿ ನೀಡಿದ ಸೋಫಿಯಾ ಖುರೇಷಿ ಅವರ ಮಾವ ಗೌಸ್‌ ಬಾಗೇವಾಡಿ ಅವರ ಹೆಮ್ಮೆಯ ಮಾತಿದು.

 ಬೆಳಗಾವಿ : ನಮ್ಮ ಸೊಸೆ ಸೋಫಿಯಾ ಧೈರ್ಯ ನೋಡಿ ನಮಗೆ ಹೆಮ್ಮೆ ಮೂಡಿತು. ನಮ್ಮ ಮನೆಯಲ್ಲಿ ಹಬ್ಬದ ವಾತಾವರಣವಿದೆ...!

ಆಪರೇಷನ್‌ ಸಿಂದೂರ ಕುರಿತು ಪ್ರಪಂಚಕ್ಕೆ ಎಳೆಎಳೆಯಾಗಿ ಮಾಹಿತಿ ನೀಡಿದ ಸೋಫಿಯಾ ಖುರೇಷಿ ಅವರ ಮಾವ ಗೌಸ್‌ ಬಾಗೇವಾಡಿ ಅವರ ಹೆಮ್ಮೆಯ ಮಾತಿದು.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಕರ್ನಲ್‌ ತಾಜುದ್ದೀನ್‌ ಬಾಗೇವಾಡಿ ಪತ್ನಿ ಸೋಫಿಯಾ ಖುರೇಶಿ ಅವರು ಭಾರತೀಯ ಸೈನಿಕರು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿದ್ದನ್ನು ಬುಧವಾರ ಮಾಧ್ಯಮದೆದುರು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದರು. ಸೋಫಿಯಾ ಖುರೇಷಿ ಬೆಳಗಾವಿ ಸೊಸೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಗುರುವಾರ ಮಾಧ್ಯಮದವರು ಮನೆಗೆ ಭೇಟಿ ನೀಡಿದಾಗ ಮಾವ ಗೌಸ್‌ ಬಾಗೇವಾಡಿ ಅವರು ಸೊಸೆಯ ಬಗ್ಗೆ ಮನತುಂಬಿ ಅಭಿಮಾನದ ಮಾತನಾಡಿದರು.

ನಮ್ಮ ಸೊಸೆಯ ಧೈರ್ಯ ನೋಡಿ ನಮ್ಮ ಊರು, ಕರ್ನಾಟಕಕ್ಕೆ ಗೌರವ ಬಂತು. ನಮ್ಮ ಮಗ-ಸೊಸೆ ಇಂದು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನನ್ನ ಮಗ ಮತ್ತು ಸೊಸೆ ಮಿಲಟರಿಯಲ್ಲಿ ಒಂದೇ ಕಡೆಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರಿಗೂ ಪರಿಚಯ ಆಗಿ ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದು 2015ರಲ್ಲಿ ಗುಜರಾತ್‌ ರಾಜ್ಯದ ಬಡೋದರಾದಲ್ಲಿ ವಿವಾಹವಾದರು. ಬುಧವಾರ ನಡೆದ ಘಟನೆ ಕುರಿತು ನಾನು ಸೊಸೆ ಜೊತೆಗೆ ಮಾತನಾಡಿಲ್ಲ. ಮಗನ ಜೊತೆಗೆ ಮಾತನಾಡಿದ್ದೇನೆ. ಆತನೇ ನಮಗೆ ಎಲ್ಲ ಮಾಹಿತಿ ಹೇಳಿದ. ನಮ್ಮ ಮನೆ ಮಂದಿಗೆ ಯಾರಿಗೂ ನಿದ್ದೆ ಹತ್ತಿಲ್ಲ. ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಖುಷಿ ಪಟ್ಟರು.

ಭಯೋತ್ಪಾದಕರಂತಹ ಮೂರ್ಖರು ಯಾರೂ ಇಲ್ಲ. ಧರ್ಮ ನೋಡಿ ಹತ್ಯೆ ಮಾಡುವ ಕೆಲಸ ಅವರು ಮಾಡಿದರು. ನನ್ನ ಮಗ ಮರಡಿಮಠ ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿ ಕಷ್ಟಪಟ್ಟು ಓದಿ ಕರ್ನಲ್‌ ಆಗಿದ್ದಾನೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೊಸೆ ಮತ್ತು ಮಗನ ಧೀರತದನ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.

ಕೊಣ್ಣೂರ ಗ್ರಾಮಕ್ಕೆ ಸೊಸೆ ಮತ್ತು ಮಗ ಬರುತ್ತಾರೆ. ಇಲ್ಲಿ ಬಂದಾಗ ಆರಾಮಾಗಿ ಇರುತ್ತಾರೆ. ನನ್ನ ಸೊಸೆಗೆ ಜೋಳದ ರೊಟ್ಟಿ, ನಾಟಿ ಕೋಳಿ ಬಹಳ ಇಷ್ಟ. ನಿಮ್ಮ ಊರು ಚೆನ್ನಾಗಿದೆ ಅಂತಾ ಸೊಸೆ ಹೇಳುತ್ತಿರುತ್ತಾರೆ. ನಮ್ಮ ಆರೋಗ್ಯದ ಬಗ್ಗೆಯೂ ಸೊಸೆ ಕಾಳಜಿ ಮಾಡುತ್ತಿರುತ್ತಾರೆ. ರಂಜಾನ್ ಹಬ್ಬಕ್ಕೆ ಬರಬೇಕಿತ್ತು. ಬರಲಿಲ್ಲ. ಬಕ್ರೀದ್ ಹಬ್ಬಕ್ಕೆ ಬರುತ್ತಾರೆ ಎಂದರು. 

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ