ಮೈಸೂರು: ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಗುರುವಾರ ಒಂದು ಅಪರೂಪದ ಕಾರ್ಯಕ್ರಮ. ಶತಾಯುಷಿ ಸಿ.ಎಸ್. ಮಂಗಳಮ್ಮ ಅವರು ರಚಿಸಿರುವ ವಿಶ್ವರೂಪ ದರ್ಶನ ಹಾಗೂ ಜೀವನ ಧರ್ಮದರ್ಶಿನಿ ಕೃತಿಗಳನ್ನು ಅವರ ಸ್ವಗೃಹದಲ್ಲಿ ಅವರ ಸಮ್ಮುಖದಲ್ಲಿಯೇ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಬಿಡುಗಡೆ ಮಾಡಿದರು.
ಶತಾಯುಷಿ ಮಂಗಳಮ್ಮನವರ ಎರಡು ಕೃತಿಗಳ ಲೋಕಾರ್ಪಣೆ
ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್. ಶಿವಲಿಂಗಪ್ಪ, ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ, ನಿವೃತ್ತ ಶಿಕ್ಷಕರಾದ ಎ. ಸಂಗಪ್ಪ, ಎನ್.ಕೆ. ಕಾವೇರಿಯಮ್ಮ, ಜಿ.ಎಸ್. ಸೀತಾರಾಂ, ನರಹರಿ, ಸರಳರಾವ್ ಮೊದಲಾದವರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ಅಕ್ಷರಶಃ ಇದೊಂದು ಅಪರೂಪದ ಸಮಾರಂಭ. ಶತಾಯುಷಿ ಮಾತ್ರವಲ್ಲ ಅದಕ್ಕೆ ತಕ್ಕ ಮಹಾ ಸಾಧನೆ ಮಾಡಿದ್ದಾರೆ.
ನಮ್ಮನ್ನು ಇಳಿವಯಸ್ಸಿನವರು ಎಂದು ಹೇಳುತ್ತಾರೆ. ಆದರೆ ನಮ್ಮದು ಏರು ವಯಸ್ಸು. ಮಂಗಳಮ್ಮ ಅವರು ಶತಾಯುಷಿ. ಫುಲ್ಲ ಶತಪತ್ರೆ. ಅವರದು ವಯೋನುಗುಣವಾದ ಮಹತ್ವಪೂರ್ಣ ಸಾಧನೆ. ಒಂದು ಕಡೆ ದಿವ್ಯ ವಾಜ್ಞಯೋಪಾಸನೆ ಮತ್ತೊಂದೆಡೆ ವೈವಿಧ್ಯಯುತ ಸಮಾಜ ಕೈಂಕರ್ಯ. ಎರಡೂ ಅವರ ಎರಡು ಕೈಗಳು. ಅವರು ಹತ್ತಾರು ಬೋಧಪ್ರದ ಪುಸ್ತಕಗಳ ರೂವಾರಿ ಎಂಬುದು ಗಮನಾರ್ಹ. ಇವತ್ತು ಬಿಡುಗಡೆಯಾದ ಎರಡು ಹೊತ್ತಿಗೆಗಳು ಕೂಡ ಎರಡು ಮುತ್ತುಗಳು, ಮಾಣಿಕ್ಯಗಳು.ಇವುಗಳಲ್ಲಿ ಸಂಸ್ಕೃತಿ ದ್ಯೋತಕಗಳಾದ ಮಾಧುರ್ಯ ಮತ್ತು ದೀಪ್ತಿ ಔಚಿತ್ಯಪೂರ್ವಣವಾಗಿ ಸಂಗಮಿಸಿವೆ ಎಂದರು.
ಅವರ ಜೀವನದಿ ನೂರನ್ನು ಮೀರಿ, ಪುರೋಗಾಮಿಯಾಗಿ ಪ್ರವಹಿಸಲಿ. ದಿವ್ಯತ್ರಯರ ಆಶೀರ್ವಾದ ಹಸ್ತಗಳು ಅವರ ನೆತ್ತಿಯ ಮೇಲಿರಲಿ ಎಂದು ಸಿಪಿಕೆ ಆಶಿಸಿದರು.
ನಮ್ಮ ಪ್ರಕಾಶದ ಮೂಲಕ ಈವರೆಗೆ ಸಾವಿರಾರು ಪುಸ್ತಕಗಳನ್ನು ಪ್ರಕಾಶನ ಮಾಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಶತಾಯುಷಿಯೊಬ್ಬರ ಪುಸ್ತಕಗಳನ್ನು ಪ್ರಕಟಿಸಿ, ಅವರ ಸಮ್ಮುಖದಲ್ಲಿಯೇ ಬಿಡುಗಡೆ ಮಾಡಿದ್ದೇವೆ. ಇದು ಸಾರ್ಥಕ ಕ್ಷಣ ಎಂದು ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ಸಂತಸ ವ್ಯಕ್ತಪಡಿಸಿದರು.
ಜೀವನ ಇವತ್ತು ಹೇಗೆ ನಡೆಯುತ್ತೆ ಗೊತ್ತಿಲ್ಲ, ನಾಳೆ ಅರ್ಥವಾಗಲ್ಲ: ಮಂಗಳಮ್ಮ
ತಾವು 118 ವರ್ಷ ಬದುಕಿರಬೇಕು. ಜಮುನಾರಾಣಿ ಮಿರ್ಲೆ ಅವರ ನೃತ್ಯ ನೋಡಬೇಕು ಎಂಬ ಹೆಬ್ಬಕೆಯನ್ನು ಅವರು ವ್ಯಕ್ತಪಡಿಸಿದರು.