ಕನ್ನಡಪ್ರಭ ವಾರ್ತೆ ಶಹಾಬಾದ
ನಗರದ ಹಳೇ ಶಹಾಬಾದ ಬಡಾವಣೆಯಲ್ಲಿ ಕಳೆದ ತಿಂಗಳು 22ರಂದು ಕುಟುಂಬ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಸಹೋದರ ಸಂಬಂಧಿಗಳ ಮನೆಗೆ ನುಗ್ಗಿ ಐದು ಜನರನ್ನು ಕಿಡ್ನ್ಯಾಪ್ ಮಾಡಿ, ಪೊಲೀಸರಿಗೆ ಮೊಬೈಲ್ ಮೂಲಕ ದಾರಿ ತಪ್ಪಿಸುತ್ತಿದ್ದ ಪ್ರಕರಣದಲ್ಲಿ ಕಿಡ್ನ್ಯಾಪ್ ಮಾಡಿದ ವ್ಯಕ್ತಿಗೆ ಮಂಗಳಮುಖಿ ಸಹಕಾರ ನೀಡಿರೋದು ತನಿಖೆಯಲ್ಲಿ ಗೊತ್ತಾಗಿದ್ದು ಸದ್ಯ ಆ ಮಂಗಳಮುಖಿ ಪೊಲೀಸ್ ಅತಿಥಿಯಾಗಿದ್ದಾಳೆ.ಹಳೆ ಶಹಾಬಾದ್ ನಿವಾಸಿಗಳಾದ ಶಿವಲಿಂಗಪ್ಪ ತಿಪ್ಪಣ್ಣನವರ್ ಹಾಗೂ ಆರೋಪಿ ಬಸವರಾಜ ತಿಪ್ಪಣ್ಣನವರ್ ಎಂಬುವವರು ಸಹೋದರ ಸಂಬಂಧಿಗಳಾಗಿದ್ದು, ಈ ಕುಟುಂಬಕ್ಕೆ ಸೇರಿದ ಒಟ್ಟು 18 ಎಕರೆ ಜಮೀನಿನ ವಿವಾದ ನ್ಯಾಯಾಲಯದಲ್ಲಿ ಇತ್ತು.
ಈ ಹಿಂದೆ ಬಸವರಾಜ ತಿಪ್ಪಣ್ಣನವರಿಂದ ಬರಬೇಕಾದ ನಾಲ್ಕು ಎಕರೆ ಭೂಮಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ, ಮೂರು ನ್ಯಾಯಾಲಯದಲ್ಲಿ ಜಯ ಸಾಧಿಸಿದ್ದ, ನಂತರ ಸ್ಥಳೀಯರ ಮಧ್ಯಸ್ಥಿಕೆಯಲ್ಲಿ ಹೊಲದ ಪಾಲು ಕುರಿತು ದಾಯಾದಿಗಳ ಮಧ್ಯೆ ಮಾತುಕತೆ ನಡೆಸಿದ್ದರು, ಶಿವಲಿಂಗಪ್ಪ ತಿಪ್ಪಣ್ಣನವರ ಕುಟುಂಬ ಒಪ್ಪದ ಮೊಂಡುತನ ಮೆರೆದಿದ್ದರು ಎನ್ನಲಾಗಿದೆ.ಮೂರು ನ್ಯಾಯಾಲಯದಲ್ಲಿ ಗೆದ್ದರೂ ಸಹ ಶಿವಲಿಂಗಪ್ಪನವರ ಕುಟುಂಬ ಸಹೋದರಿಯರಿಂದ ಮತ್ತೆ ನ್ಯಾಯಾಲಕ್ಕೆ ಮೊರೆ ಹೋಗುವ ಮೂಲಕ 4 ಎಕರೆ ಭೂಮಿ ನೀಡದೆ, ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದರು.
ನ್ಯಾಯಾಲಯದಲ್ಲಿ ಗೆದ್ದರು, ಸ್ಥಳೀಯರ ಮಧ್ಯಸ್ಥಿಕೆಯಲ್ಲಿ ಒಪ್ಪದೆ, ಮತ್ತೆ ಹೆಣ್ಣು ಮಕ್ಕಳ ಮೂಲಕ ನ್ಯಾಯಾಲಯಕ್ಕೆ ಹೋಗುತ್ತಿರುವುದರಿಂದ ರೋಷಿಹೋದ ಬಸವರಾಜ ಸ್ಥಿಮಿತ ಕಳೆದುಕೊಂಡು, ಮಾ.22ರಂದು ನಸುಕಿನಲ್ಲಿ ಕಲಬುರಗಿಯಿಂದ ಮೂರು ಜನರನ್ನು ಕರೆಸಿ, ತಾನು ವಾಹನ ತೆಗೆದುಕೊಂಡು ಬಂದು ಮನೆಯಲ್ಲಿ ಮಲಗಿದ್ದ ಶಿವಲಿಂಗಪ್ಪ ತಿಪ್ಪಣ್ಣನವರ್, ಪವನ ತಿಪ್ಪಣ್ಣನವರ ದ್ರೌಪತಿ, ಅಂಜನಾದೇವಿ, ಕಸ್ತೂರಿಬಾಯಿ ಎಂಬುವವರನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ, ಪವನ ಎಂಬುವವನ ಕೈಬೆರಳಿನ ಉಗುರನ್ನು ಕಿತ್ತು ಹಾಕಿದ್ದ. ಅಂದೇ ಮದ್ಯಾಹ್ನ ಪೊಲೀಸರ ತ್ವರಿತ ಕಾರ್ಯಾಚಾರಣೆಯಿಂದ ಆರೋಪಿಯನ್ನು ಕಿಡ್ನ್ಯಾಪ್ ಆದವರ ಸಹಿತ ವಶಕ್ಕೆ ಪಡೆದಿದ್ದರು.ಪ್ರಕರಣ ಕುರಿತು ಎಸ್‍ಪಿ ಅಕ್ಷಯ ಹಾಕೆ, ಎಎಸ್‍ಪಿ ಎಂ.ಶ್ರೀನಿಧಿ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ ಗುಂಡೇರಾವ, ಮಾಡಬೂಳ ಪಿಎಸ್‍ಐ ಅಮೋಜ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯಾದ ಎಎಸ್‍ಐ ಗುಂಡಪ್ಪ, ದೊಡ್ಡಪ್ಪ, ಶ್ರೀಕಾಂತ, ಬಸವರಾಜ, ಕಾಮಯ್ಯ ಗುತ್ತೇದಾರ, ಸಂತೋಷ ಅವರು ಆರೋಪಿಗೆ ಸಹಾಯ ಮಾಡಿದ ಕಲಬುರಗಿಯ ಮೂರು ಜನರನ್ನು ಬಂಧಿಸಲು ಜಾಲ ಬೀಸಿದ್ದರು.
ಸದರಿ ಪ್ರಕರಣದಲ್ಲಿ ಕಲಬುರಗಿಯ ರಾಣೇಶ ಪೀರ್ ದರ್ಗಾ ಬಡಾವಣೆ ನಿವಾಸಿ ಮಂಗಳಮುಖಿ ವಿಜ್ಜು ಉರ್ಫ್ ಶೀಲಾ ಚಂದ್ರಶೇಖರ ನಾಟೀಕಾರ ಎಂಬುವಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಿಡ್ನ್ಯಾಪ್ ಆದವರನ್ನು ಮನಬಂದತೆ ಥಳಿಸಿದ ವ್ಯಕ್ತಿ ಎಂದು ಗೊತ್ತಾಗಿದೆ. ಇನ್ನೋರ್ವ ಆರೋಪಿ ಅಮರನಾಥ ಚಂದ್ರಕಾಂತ ಹಿಂದೋಟಿ ಎಂಬ ಯುವಕನನ್ನು ಬಂಧಿಸಲಾಗಿದೆ.