ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕಳ ಹೆಸರಿಡಿ: ಮಮತಾ ಬಲ್ಲಾಳ್

KannadaprabhaNewsNetwork | Published : Feb 23, 2025 12:35 AM

ಸಾರಾಂಶ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲ ನಗರಸಭೆ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಶನಿವಾರ 28ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ ನಡೆಯಿತು.

28ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಉಳ್ಳಾಲ

ತುಳುನಾಡಿನಲ್ಲಿ ಆಳ್ವಿಕೆ ನಡೆಸಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲ ವೀರ ರಾಣಿ ಅಬ್ಬಕ್ಕಳ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕಿದೆ ಎಂದು ಮೂಡುಬಿದಿರೆ ಚೌಟರ ಅರಮನೆಯ ರಾಣಿ ಅಬ್ಬಕ್ಕ ವಂಶಸ್ಥೆ ಮಮತಾ ಬಲ್ಲಾಳ್ ಆಗ್ರಹಿಸಿದರು.

ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲ ನಗರಸಭೆ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಶನಿವಾರ 28ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ ಉದ್ಘಾಟಿಸಿ ಮಾತನಾಡಿದರು.ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮಾತನಾಡಿ, ಅಬ್ಬಕ್ಕಳ ಹೆಸರಿನಲ್ಲಿ ಒಂದು ಲಕ್ಷ ರು. ಪ್ರೋತ್ಸಾಹ ಧನ ಸಮೇತ ಮಹಿಳೆಯೊಬ್ಬರಿಗೆ ಅಬ್ಬಕ್ಕ ಪ್ರಶಸ್ತಿ ನೀಡಲಾಗುವುದು, ಅಬ್ಬಕ್ಕ ಉತ್ಸವ ಆಚರಣೆಗೆ ಮುಂದಿನ ವರ್ಷದಿಂದ 10 ಲಕ್ಷ ರು. ಮಂಜೂರು ಮಾಡುವುದಾಗಿ ಹಾಗೂ ಅಬ್ಬಕ್ಕ ಸಂಕಥನ 2000 ಪ್ರತಿ ಮರು ಮುದ್ರಿಸಿ ಕೊಡುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿ, ವಿವಿಧ ಗೋಷ್ಠಿಗಳನ್ನು ಉದ್ಘಾಟಿಸಿದರು.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರಿನ ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಅಲೆಮಾರಿ, ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೋಟ್ಟು, ನಗರಸಭೆ ಉಪಾಧ್ಯಕ್ಷೆ ಸಪ್ನಾ ಹರೀಶ್, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಯಶವಂತ ಅಮೀನ್, ನಗರಸಭೆ ಪೌರಾಯುಕ್ತ ಮತ್ತಡಿ, ಸಮಾಜ ಸೇವಕ ಚಂದ್ರಶೇಖರ್ ಉಚ್ಚಿಲ್, ಹೈದರ್ ಪ್ರತಿಪಾಡಿ, ಸದಾನಂದ ಬಂಗೇರ, ಸೀತಾರಾಮ್ ಬಂಗೇರ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಹರೀಶ್, ಟಿ.ಎಸ್. ಅಬ್ದುಲ್ಲ, ನಗರಸಭೆಯ ಮಾಜಿ ಸದಸ್ಯ ಫಾರೂಕ್ ಉಳ್ಳಾಲ, ಮೋಹನ್, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್, ಸದಸ್ಯರಾದ ಜಯ ಸುವರ್ಣ ಹಾಗೂ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತ ಅಧ್ಯಕ್ಷ ಕೆ. ಜಯರಾಮ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು.ಕೆ.ಎಂ.ಕೆ. ಮಂಜನಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತಿ ಉಳ್ಳಾಲ್ ವಂದಿಸಿದರು.ಉಳ್ಳಾಲ ಮಾಸ್ತಿಕಟ್ಟೆಯಿಂದ ಕಾರ್ಯಕ್ರಮ ನಡೆಯಲಿರುವ ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದ ವರೆಗೂ ಸಾಗಿದ ಈ ಜಾನಪದ ದಿಬ್ಬಣದಲ್ಲಿ ಕೊಂಬು, ಯಕ್ಷಗಾನ, ಜರಿಕೊಡೆ, ಸೈಟ್ ಆ್ಯಂಡ್ ಗೈಡ್ಸ್ ಮತ್ತು ಬ್ಯಾಂಡ್ ಸೆಟ್, ಪಾಲಕ್ಕಿ ಕುಣಿತ, ಕಂಗೀಲು, ದಫ್ ಕುಣಿತ, ಮಡಿ ಕುಣಿತ, ಡೋಲು ನಲಿಕೆ, ಕುದುರೆಯನ್ನೇರಿದ ಅಬ್ಬಕ್ಕೆ ಮತ್ತು ಪೋರ್ಚುಗೀಸರು, ಸಂಮಾಳ ವಾದನ, ಆರೇ ವಾದ್ಯ ಇತ್ಯಾದಿಗಳು ಆಕರ್ಷಣಿಯವಾಗಿತ್ತು.

Share this article