ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ 165 ಕೋಟಿ ರು. ಘೋಷಣೆಯಾಗಿದ್ದು, ಆ ಯೋಜನೆಯ ಹೆಸರು ಬದಲಾಯಿಸಿ ಈಗ ಶಿಲಾನ್ಯಾಸ ಮಾಡಲು ಹೊರಟಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಮಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ 165 ಕೋಟಿ ರು. ಘೋಷಣೆಯಾಗಿದ್ದು, ಆ ಯೋಜನೆಯ ಹೆಸರು ಬದಲಾಯಿಸಿ ಈಗ ಶಿಲಾನ್ಯಾಸ ಮಾಡಲು ಹೊರಟಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1ಕ್ಕೆ 165 ಕೋಟಿ ರು. ಘೋಷಣೆಯಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಂಗಳೂರು ಸಹಿತ ಎಲ್ಲ ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ತಡೆ ನೀಡಿತು. ಈಗ ಯೋಜನೆಯ ಹೆಸರಿನ ಮುಂದೆ 2.0 ಸೇರಿಸಿ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ ಎಂದು ಅಲ್ಲಲ್ಲಿ ಬ್ಯಾನರ್ ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಅದೇ ಯೋಜನೆ, ಅದೇ ಅನುದಾನ. ಹೆಸರು ಮಾತ್ರ ಬದಲಾವಣೆ ಅಷ್ಟೇ ಎಂದು ವ್ಯಂಗ್ಯವಾಡಿದರು.ಶ್ವೇತಪತ್ರ ಹೊರಡಿಸಲಿ: ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಚರ್ಚೆ ಆರಂಭಿಸಿರುವ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ಸ್ವತಃ ತಾವೇ ಅದನ್ನು ಪಾಲಿಸುತ್ತಿದ್ದಾರಾ ಎಂಬುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರು. ಅನುದಾನಗಳನ್ನು ತಂದಿದ್ದೇನೆ. ಇದಕ್ಕೆ ಪೂರಕವಾದ ದಾಖಲೆಗಳನ್ನು ನೀಡಲು ನಾನು ತಯಾರಿದ್ದೇನೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಅನುದಾನಗಳು ಬಂದು ಯಾವ ಕಾಮಗಾರಿ ಅನುಷ್ಠಾನಗೊಂಡಿದೆ ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕರು ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಅವರು ಸವಾಲೆಸೆದರು.
ಶಾಸಕರಿಗೆ ಅನುದಾನದಲ್ಲಿ ತಾರತಮ್ಯ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ವಿಶೇಷ ಅನುದಾನ, ಬಿಜೆಪಿ-ಜೆಡಿಎಸ್ ಶಾಸಕರಿಗೆ 25 ಕೋಟಿ ರು. ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಈವರೆಗೆ ಯಾವುದೇ ಅನುಷ್ಠಾನ ಪ್ರಕ್ರಿಯೆ ಆಗಿಲ್ಲ. ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಬಗ್ಗೆ ವಿಧಾನಸಭಾ ಸ್ಪೀಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ನಾಯಕರು, ಅಧಿಕಾರಿಗಳು ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಮ್ಯಾರಥಾನ್ ಸಭೆ ನಡೆಸಿದರೂ ಬಜೆಟ್ ಘೋಷಣೆ ವೇಳೆ ನಯಾಪೈಸೆ ಅನುದಾನ ಬಂದಿಲ್ಲ ಎಂದರು.ಸುಮಾರು 4 ಕೋಟಿ ರು. ವೆಚ್ಚದಲ್ಲಿ ರಾಜಕಾಲುವೆಗಳ ಹೂಳೆತ್ತುತ್ತಿದ್ದೇವೆ ಎಂದು ಭಾರೀ ಹುಮ್ಮಸ್ಸಿನಿಂದ ಹೇಳಿಕೆ ಕೊಡುವ ಕಾಂಗ್ರೆಸ್ ನಾಯಕರಿಗೆ, ಅದು ಪ್ರತೀ ವರ್ಷವೂ ನಡೆದೇ ನಡೆಯುತ್ತದೆ ಎಂಬುದರ ಅರಿವಿಲ್ಲವೇ? ಅದು ಮಹಾನಗರ ಪಾಲಿಕೆಯ ಅನುದಾನ. ಇಲ್ಲಿನ ಜನರ ತೆರಿಗೆಯ ಹಣ. ಇದನ್ನೂ ಸಹ ನಮ್ಮ ಸರ್ಕಾರದ ಸಾಧನೆ ಎನ್ನುವುದಾ? ನಾಳೆ ಇವರು ನಮ್ಮ ಸರ್ಕಾರ ನೀರು ಕೊಟ್ಟಿದೆ, ರಸ್ತೆ ಗುಂಡಿ ಮುಚ್ಚಿದೆ ಎಂದು ಹೇಳಿದರೂ ಆಶ್ಚರ್ಯವಿಲ್ಲ. 10 ಕೋಟಿ ರು. ಮಳೆ ಹಾನಿಯ ಪರಿಹಾರ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಇತ್ತು. ಇದು ಕ್ಷೇತ್ರದ ಶಾಸಕರಿಗೆ ಬರುವ ಅನುದಾನವಾಗಿದ್ದು, ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿಶೇಷ ಸಾಧನೆ ಎಂದು ಬಿಂಬಿಸುವುದರಲ್ಲಿ ಅರ್ಥವಿಲ್ಲ ಎಂದರು.
ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.