ಕೆನರಾ ಕಾಲೇಜಿಗೆ 2025-26ನೇ ಸಾಲಿನಿಂದ ಸ್ವಾಯತ್ತ ಸ್ಥಾನಮಾನ

KannadaprabhaNewsNetwork |  
Published : Mar 06, 2026, 03:15 AM IST
ಸುದ್ದಿಗೋಷ್ಠಿಯಲ್ಲಿ ಡಿ.ವಾಸುದೇವ ಕಾಮತ್‌ ಮಾತನಡುತ್ತಿರುವುದು | Kannada Prabha

ಸಾರಾಂಶ

ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧೀನದ ಕೆನರಾ ಕಾಲೇಜಿಗೆ 2025-2026ರಿಂದ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ಲಭ್ಯವಾಗಿದೆ.

ಮಂಗಳೂರು: ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧೀನದ ಕೆನರಾ ಕಾಲೇಜಿಗೆ 2025-2026ರಿಂದ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ಲಭ್ಯವಾಗಿದೆ.ಇದು ಕಾಲೇಜಿನ ಶೈಕ್ಷಣಿಕ ಪಥದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಮುಂದಿನ 10 ವರ್ಷ ವರೆಗೆ ಇದು ಮಾನ್ಯವಾಗಲಿದ್ದು, ಮುಂದೆ ಕೆನರಾ ಡೀಮ್ಡ್ ವಿಶ್ವವಿದ್ಯಾಲಯ ರಚಿಸಲು ಪ್ರಯತ್ನಿಸಲಾಗುವುದು ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ಡಿ. ವಾಸುದೇವ ಕಾಮತ್ ತಿಳಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಸ್ವಾಯತ್ತ ಸ್ಥಾನಮಾನದಿಂದ ಸಮಾಜ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸುವ, ಪರಿಷ್ಕರಿಸುವ ಅಧಿಕಾರವೂ ದೊರೆತಿದೆ. ಈ ಮೂಲಕ ಸಮಕಾಲಿನ ಕೌಶಲ್ಯ ಆಧಾರಿತ ಬಹುಶಾಖಾ ಮತ್ತು ವೃತ್ತಿ ಕೇಂದ್ರಿತ ಪಠ್ಯಕ್ರಮಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಮತ್ತು ಪ್ರಸ್ತುತ ಅವಶ್ಯಕತೆಗಳಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು.

ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ, ಕೆನರಾ ಕಾಲೇಜು 1,569 ವಿದ್ಯಾರ್ಥಿಗಳು ಮತ್ತು 85 ಅರ್ಹ ಉಪನ್ಯಾಸಕ ಹಾಗೂ ಸಿಬ್ಬಂದಿಯೊಂದಿಗೆ ಶಿಸ್ತು, ಹೊಸತನ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವ ಚೈತನ್ಯಯುತವಾದ ಶೈಕ್ಷಣಿಕ ವಾತಾವರಣವನ್ನು ಕಾಪಾಡಿಕೊಂಡು ಬಂದಿದೆ ಎಂದರು.ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಕೋಶಾಧಿಕಾರಿ ಸಿಎ ಜಗನ್ನಾಥ ಕಾಮತ್ ಮಾತನಾಡಿ, ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡ ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಲು ಕಾಲೇಜು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಲಾಜಿಸ್ಟಿಕ್ಸ್‌ನಲ್ಲಿ ಬಿಬಿಎ, ಡೇಟಾ ಅನಾಲಿಟಿಕ್ಸ್‌ನಲ್ಲಿ ಬಿಸಿಎ, ಬಿಸಿನೆಸ್ ಡೇಟಾ ಅನಾಲಿಟಿಕ್ಸ್‌ನಲ್ಲಿ ಬಿ.ಕಾಂ. ಕೋರ್ಸ್ ಆರಂಭಿಸಲಾಗುವುದು ಎಂದರು.ಸ್ವಾಯತ್ತತೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಅಧ್ಯಯನ ಮಂಡಳಿಎಂಬ ಪ್ರಸಿದ್ಧ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಬದ್ಧವಾದ ಸಂಸ್ಥೆಯಿಂದ 1973ರಲ್ಲಿ ಸ್ಥಾಪಿತವಾದ ಕೆನರಾ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿದ್ದು ಕಳೆದ ಐದು ದಶಕಗಳಲ್ಲಿ ಮಂಗಳೂರು ನಗರದಲ್ಲಿನ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ ಎಂದರು.

ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಕೋಶಾಧಿಕಾರಿ ಸಿಎ ಎಂ ವಾಮನ್ ಕಾಮತ್, ಸಂಚಾಲಕ ಹಾಗೂ ಕೆನರಾ ವಿಕಾಸ್ ಕಾಲೇಜಿನ ಕೋ- ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಮತ್ತಿತರರಿದ್ದರು.ಕಳೆದ 2 ವರ್ಷಗಳಲ್ಲಿ 12 ರ್‍ಯಾಂಕ್

ತನ್ನ 53 ವರ್ಷಗಳ ಹಾದಿಯಲ್ಲಿ ಕೆನರಾ ಕಾಲೇಜು ವಿವಿ ಮಟ್ಟದಲ್ಲಿ 135 ರ್‍ಯಾಂಕ್ ಗಳನ್ನು ಗಳಿಸಿ ನಿರಂತರವಾಗಿ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಿದೆ. ವಿಶೇಷವಾಗಿ 2023 -24 ಮತ್ತು 2024- 25ನೇ ಶೈಕ್ಷಣಿಕ ವರ್ಷಗಳಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 12 ರ್‍ಯಾಂಕ್ ಗಳನ್ನು ಪಡೆದಿದ್ದು ಅದರ ಶಕ್ತಿಶಾಲಿ ಶೈಕ್ಷಣಿಕ ಸಾಧನೆಯನ್ನು ರುಜುವಾತು ಪಡಿಸಿದೆ.

ಬಿಸಿಎ(BCA) ಮತ್ತು ಎಂಸಿಎ(MCA) ವಿಭಾಗಗಳು ಸಂಸ್ಥೆಯ ಪ್ರಮುಖ ಶೈಕ್ಷಣಿಕ ಆಧಾರ ಸ್ಥಂಭಗಳಾಗಿದ್ದು ಗುಣಮಟ್ಟದ ಬೋಧನೆ, ಕೈಗಾರಿಕಾ ಆಧಾರಿತ ಪಠ್ಯಕ್ರಮ ಮತ್ತು ಕಂಪ್ಯೂಟರ್ ಅನ್ವಯಿಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಭದ್ರಬುನಾದಿಯಾಗಿದೆ ಎಂದು ಸಿಎ ಜಗನ್ನಾಥ ಕಾಮತ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಪರೀಕ್ಷೆಗೊಳಗಾದ್ರೂ ಅಳಿಸಲಸಾಧ್ಯ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್
ಕರಾಡ ಅಡುಗೆಯ ಘಮಲು ಈಗ ಜಗದಗಲ!