ಮಂಗಳೂರು: ಗಾಳಿ ಮಳೆಗೆ ಮರ, ಕಂಪೌಂಡ್‌ ಬಿದ್ದು ಮನೆ, ವಾಹನ ಜಖಂ

KannadaprabhaNewsNetwork |  
Published : Apr 24, 2026, 01:15 AM IST
ಕಂಪೌಂಡ್‌ ಬಿದ್ದು ಕಾರು ಜಖಂಗೊಂಡಿರುವುದು  | Kannada Prabha

ಸಾರಾಂಶ

ಮಂಗಳೂರು ನಗರದ ಹಲವು ಕಡೆಗಳಲ್ಲಿ ಬುಧವಾರ ನಸುಕಿನ ಜಾವ ಸಿಡಿಲು, ಮಿಂಚು, ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಅವಾಂತರ ಸಂಭವಿಸಿದೆ.

ಮಂಗಳೂರು: ಮಂಗಳೂರು ನಗರದ ಹಲವು ಕಡೆಗಳಲ್ಲಿ ಬುಧವಾರ ನಸುಕಿನ ಜಾವ ಸಿಡಿಲು, ಮಿಂಚು, ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಅವಾಂತರ ಸಂಭವಿಸಿದೆ. ನಗರದ ಅತ್ತಾವರ ಪ್ರದೇಶದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮೀಪ ಕಂಪೌಂಡ್‌ ಗೋಡೆ ಕುಸಿದು ಅಲ್ಲಿ ನಿಲ್ಲಿಸಿದ್ದ ಐದಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ಬಿದ್ದು ಜಖಂಗೊಂಡಿವೆ. ಅಲ್ಲಿನ ದೇವಸ್ಥಾನದಲ್ಲಿ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದುದರಿಂದ ಗೋಡೆ ಸಮೀಪ ಸ್ಥಳೀಯರು ತಮ್ಮ ಕಾರು ನಿಲ್ಲಿಸಿದ್ದರು. ಬೇಸಗೆಯ ಒಂದೇ ಮಳೆಗೆ ತಡೆಗೋಡೆ ಕುಸಿದಿದ್ದು, ಕಲ್ಲಿನ ಸಮೇತ ಪಾರ್ಕಿಂಗ್‌ ಪ್ರದೇಶಕ್ಕೆ ಬಿದ್ದಿದೆ.

ಇನ್ನೊಂದೆಡೆ ನಗರದ ರಥಬೀದಿಯ ಚಮ್ಮಾರ ಗಲ್ಲಿ ಮತ್ತು ಬಸವನಗುಡಿ ಪರಿಸರದ ಅಶ್ವಥ ಕಟ್ಟೆಯ ಬಳಿ ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಬೃಹತ್ ಅಶ್ವತ್ಥ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿದೆ. ಈ ಘಟನೆಯಿಂದ ಮರದ ಸಮೀಪದಲ್ಲಿದ್ದ ಎರಡು ಮನೆ ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಮರದ ಕೊಂಬೆಗಳು ಅಪ್ಪಳಿಸಿದ ರಭಸಕ್ಕೆ ಅಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಈ ಪೈಕಿ ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.

ಮನೆಯಲ್ಲಿದ್ದ ನಾಲ್ಕು ತಿಂಗಳ ಮಗು ಹಾಗೂ 80 ವರ್ಷದ ಇಬ್ಬರು ವೃದ್ಧರ ಸಹಿತ ಐವರು ಅಪಾಯದಿಂದ ಪಾರಾಗಿದ್ದಾರೆ. ವರದರಾಜ ಶೇಟ್‌ ಎಂಬವರಿಗೆ ಸೇರಿದ ಮನೆ ಇದಾಗಿದೆ. ಮರದ ಕೊಂಬೆ ಬಿದ್ದ ಕಾರಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಮಂಗಳೂರು ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ. ರಥಬೀದಿಯ ಬಸವನಗುಡಿ ಬಳಿಯೂ ಮರದ ಕೊಂಬೆ ಬಿದ್ದ ಕಾರಣ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.

ಮುಂಜಾಗ್ರತಾ ಕ್ರಮವಾಗಿ ಹಳೆಯ ಮರಗಳು ಮತ್ತು ದುರ್ಬಲ ಗೋಡೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಲಶೇಖರ: ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ ಮೆರವಣಿಗೆ
ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿಗೆ 85 ರ್‍ಯಾಂಕ್‌