ಮಂಗಳೂರು: ನಗರದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜನಸಂಬಂಧಿತ ಸಮಸ್ಯೆಗಳ ಪರಿಶೀಲನೆಯ ಭಾಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ರತ್ನಂ ಪಾಂಡೆ ಶನಿವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಯೋಜನೆಯ ಬಿಡ್ಡಿಂಗ್ ಪ್ರಕ್ರಿಯೆ, ಹೂಡಿಕೆ, ನಿರ್ಮಾಣದ ಗುಣಮಟ್ಟ, ಭೂಸ್ವಾಧೀನ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಯುಕ್ತರಿಗೆ ಮಾಹಿತಿ ನೀಡಿದರು.
ಯೋಜನೆಗೆ ಅಗತ್ಯವಿರುವ ಸ್ಥಳಾವಕಾಶ ಒದಗಿಸುವ ವಿಚಾರದಲ್ಲಿ ಕೆಲ ಭೂಮಾಲೀಕರು ತಮ್ಮ ಜಾಗವನ್ನು ನೀಡಲು ಒಪ್ಪದಿರುವುದರಿಂದ ರಸ್ತೆ ಹಾಗೂ ಯೋಜನೆಗೆ ಅಗತ್ಯವಿರುವ ಸ್ಥಳಾವಕಾಶದ ವಿಚಾರದಲ್ಲಿ ಸವಾಲು ಎದುರಾಗಿದೆ ಎಂದು ಅವರು ತಿಳಿಸಿದರು. ಯೋಜನೆಯ ಸುತ್ತಮುತ್ತ ಸುಮಾರು 84 ಮಂದಿ ಭೂಮಾಲೀಕರು ಇರುವುದಾಗಿ ಮಾಹಿತಿ ನೀಡಿದರು.ಹಳೆಯ ಬಸ್ ನಿಲ್ದಾಣದ ಕಟ್ಟಡ ಏಳು ದಶಕಗಳಿಗೂ ಅಧಿಕ ಹಳೆಯದಾಗಿದ್ದು, ಸುತ್ತಮುತ್ತಲಿನ ಕಟ್ಟಡಗಳು ಸುಮಾರು ನಾಲ್ಕು ದಶಕಗಳಷ್ಟು ಹಳೆಯವು ಎಂದು ಅರುಣ್ ಪ್ರಭಾ ವಿವರಿಸಿದರು. ಯೋಜನೆಗಾಗಿ ಜಾಗವನ್ನು ಬಿಡ್ಡರ್‌ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವನೆ ಇರುವುದಾಗಿ ತಿಳಿಸಿದರು.
ಬಳಿಕ ಸುರತ್ಕಲ್–ಇಡ್ಯಾ ವೆಟ್‌ವೆಲ್ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಪಂಪಿಂಗ್ ವ್ಯವಸ್ಥೆ ಹಾಗೂ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಆಯುಕ್ತರಿಗೆ, ವೆಟ್‌ವೆಲ್ ವ್ಯವಸ್ಥೆ ತಮ್ಮ ಪ್ರದೇಶದಲ್ಲಿ ಸ್ಥಾಪನೆಯಾಗುವುದಕ್ಕೆ ನಿವಾಸಿಗಳು ಬೆಂಬಲ ವ್ಯಕ್ತಪಡಿಸುತ್ತಿಲ್ಲ ಎಂದು ತಿಳಿಸಿದರು.
ಸ್ಥಳೀಯ ನಿವಾಸಿಗಳ ಅಭಿಪ್ರಾಯ ಹಾಗೂ ಆತಂಕಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ ಆಯುಕ್ತರು, ನಿವಾಸಿಗಳ ಇಚ್ಛೆಗೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಭರವಸೆ ನೀಡಿದರು. ಈ ಕುರಿತು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.